ADVERTISEMENT

ಮೂರ್ನಾಡು: ಮಳೆಗೆ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:50 IST
Last Updated 12 ಅಕ್ಟೋಬರ್ 2011, 6:50 IST

ನಾಪೋಕ್ಲು: ವರುಣನ ಆರ್ಭಟದಿಂದ ಮುತ್ತಾರುಮುಡಿಯ ಬಳಿ ಮರಗಳು, ವಿದ್ಯುತ್ ಕಂಬಗಳು ಉರುಳಿ ವಾಹನ ಸಂಚಾರ ಅಸ್ತವ್ಯಸ್ಥವಾಗಿ ಮೂರ್ನಾಡು ಪಟ್ಟಣವು ತತ್ತರಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನ ಮೂರು ಗಂಟೆಯಿಂದ ನಾಲ್ಕೂವರೆ ಗಂಟೆಯವರೆಗೆ ಸುರಿದ ಭಾರಿ ಗಾಳಿ, ಸಿಡಿಲು, ಮಳೆಗೆ ಮೂರ್ನಾಡುವಿನ ಮುತ್ತಾರುಮುಡಿ ಗ್ರಾಮದಲ್ಲಿ ಮಡಿಕೇರಿಗೆ ಸಾಗುವ ರಸ್ತೆಯಲ್ಲಿ, ಬಡುವಂಡ ಬೋಪಣ್ಣ ಅವರ ಮನೆಯಿಂದ ಮರಗೋಡುವಿಗೆ ಸಾಗುವ ರಸ್ತೆಯವರೆಗೆ ಮರಗಳು ಬಿದ್ದು ರಸ್ತೆ ಸಂಪೂರ್ಣ ಮರಗಳಿಂದ ಮುಚ್ಚಿ ಹೋಗಿದೆ.

ಒಂದು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಎರಡು ಮರಗಳು ಬುಡ ಮೇಲಾಗಿ ಪಕ್ಕದ ತೋಟಕ್ಕೆ ಬಿದ್ದಿದೆ. ರಸ್ತೆ ಬದಿಯಲ್ಲಿದ್ದ ಮರವೊಂದು ಉರುಳಿ ರಸ್ತೆ ಗುಂಡಿಯಾಗಿದೆ. ರಸ್ತೆ ಬದಿಯಲ್ಲಿನ ಹತ್ತಕ್ಕೂ ಅಧಿಕ ಮರದ ದೊಡ್ಡ ಕೊಂಬೆಗಳು ರಸ್ತೆಗೆ ಮುರಿದು ಬಿದ್ದು ರಸ್ತೆಯು ಸಂಪೂರ್ಣ ಮರದ ಕೊಂಬೆಗಳಿಂದ ಮುಚ್ಚಿ ಹೋಗಿದೆ.

ಮರ ಬೀಳುವ ವೇಳೆಗೆ ಮೂರ್ನಾಡುವಿನ ಅಶ್ರಫ್ ಎಂಬುವವರಿಗೆ ಸೇರಿದ ಆಟೋ ಹಾಗೂ ಕಡಂಗದ ಮಹಮ್ಮದ್ ಅವರ ಪಿಕ್ ಅಪ್ ವಾಹನ ಬಿದ್ದ ಮರಗಳ ನಡುವೆ ರಸ್ತೆಯಲ್ಲಿ ಸಿಲುಕಿ ನಿಂತು ಹೋಗಿದೆ. ಪಿಕ್‌ಅಪ್‌ನ ಮೇಲೆ ಮರದ ಒಂದು ಕೊಂಬೆ ಬಿದ್ದು ಚಾಲಕ ಅನಾಹುತದಿಂದ ಪಾರಾಗಿದ್ದಾರೆ.

ಮಡಿಕೇರಿ ರಸ್ತೆಯ ಸರಸ್ವತಿ ನಗರದ ಬಳಿ ಗ್ಯಾರೇಜ್‌ನ ಸಿಮೆಂಟ್ ಶೀಟ್‌ಗಳು ಸಂಪೂರ್ಣ ಗಾಳಿಗೆ ಹಾರಿ ಗದ್ದೆಗೆ ಬಿದ್ದು ನಷ್ಟ ಸಂಭವಿಸಿದೆ. ಅದರ ಪಕ್ಕದಲ್ಲಿ ಪೆಟ್ರೋಲ್ ಬಂಕ್‌ನ ಬಳಿ ನಾಲ್ಕು ವಿದ್ಯುತ್ ಕಂಬಗಳು ಹಾಗೂ ಒಂದು ಟ್ರಾನ್ಸ್‌ಫಾರ್ಮರ್ ಬಿದ್ದು ವಿದ್ಯುತ್ ತಂತಿಗಳು ತುಂಡಾಗಿವೆ.

ಮಡಿಕೇರಿ ವಿರಾಜಪೇಟೆ ನಡುವಿನ ವಾಹನಗಳ ಸಂಚಾರ ಅಸ್ತವ್ಯಸ್ಥವಾಗಿದ್ದು, ವಾಹನಗಳು ಮುತ್ತಾರುಮುಡಿಯಿಂದ ಮರಗೋಡುವಿನ ಕಡೆಗೆ ಚಲಿಸುವಂತೆ ಪೊಲೀಸರು ಅನುವು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.