ADVERTISEMENT

ಮೇ 15: ಅನಾಥ ಮುಸ್ಲಿಂ ಯುವತಿಯರ ವಿವಾಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 8:15 IST
Last Updated 4 ಫೆಬ್ರುವರಿ 2011, 8:15 IST

ಮಡಿಕೇರಿ: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಬಡ ಮತ್ತು ಅನಾಥ ಮುಸ್ಲಿಂ ಯುವತಿಯರ ಸಾಮೂಹಿಕ ವಿವಾಹ ಸಮಾರಂಭವನ್ನು ಮೇ 15ರಂದು ನಗರದ ಕಾವೇರಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಎಫ್.ಎ. ಮಹಮದ್ ಹಾಜಿ ಹಾಗೂ ಪ್ರಚಾರ ಕಾರ್ಯದರ್ಶಿ ಎಂ.ಇ. ಮಹಮದ್, ಈ ಬಾರಿ ಅರ್ಹ 25 ಮಂದಿ ಯುವತಿಯರ ಸಾಮೂಹಿಕ ವಿವಾಹವನ್ನು ಉಚಿತವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕಳೆದ ಆರು ವರ್ಷಗಳಿಂದ ಬಡ ಹಾಗೂ ಅನಾಥ ಮುಸ್ಲಿಂ ವಿವಾಹ ನಡೆಸಿಕೊಂಡು ಬರುತ್ತಿರುವ ಅಲ್-ಅಮೀನ್ ಜಿಲ್ಲಾ ಸಮಿತಿ, ಕಳೆದ ಆರು ವರ್ಷಗಳಲ್ಲಿ ಒಟ್ಟು 165 ಮುಸ್ಲಿಂ ಯುವತಿಯರ ಉಚಿತ ವಿವಾಹ ನೆರವೇರಿಸಿದೆ ಎಂದು ತಿಳಿಸಿದರು.

ವಧುವಿಗೆ ತಲಾ ಐದು ಪವನ್ ಆಭರಣ, ಒಂದು ಜತೆ ಉಡುಪು ಹಾಗೂ ವರನಿಗೂ ಉಡುಪು ನೀಡಲಾಗುವುದು. ಅಲ್ಲದೆ, ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ವಧು-ವರರ ಕಡೆಯವರೂ ಸೇರಿದಂತೆ ಸಾರ್ವಜನಿಕ ಬಾಂಧವರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ಜೋಡಿ ವಿವಾಹಕ್ಕೆ ಸುಮಾರು 90 ಸಾವಿರ ರೂಪಾಯಿಗಳನ್ನು ಖರ್ಚು ತಗುಲಲಿದೆ. ಈ ಬಾರಿಯ ವಿವಾಹಕ್ಕೆ ಸುಮಾರು 22 ಲಕ್ಷ ರೂಪಾಯಿಗಳ ಅವಶ್ಯಕತೆಯಿದ್ದು, ಸಮಾಜದ ಕೊಡುಗೈ ದಾನಿಗಳಿಂದ ನೆರವು ನಿರೀಕ್ಷಿಸಲಾಗಿದೆ ಎಂದರು.

ಒಂದೇ ಬಾರಿಗೆ 25ಕ್ಕಿಂತ ಹೆಚ್ಚಿನ ವಿವಾಹ ನಡೆಸಿದಲ್ಲಿ ಸರ್ಕಾರದ ಆದರ್ಶ ವಿವಾಹ ಯೋಜನೆಯ ಸೌಲಭ್ಯ ದೊರಕಲಿದೆ. ಪ್ರತಿ ವಧುವಿಗೆ ತಲಾ 10 ಸಾವಿರ ರೂಪಾಯಿಗಳನ್ನು ಸರ್ಕಾರ ನೀಡಲಿದೆ. ಯೋಜನೆಯನ್ವಯ ಕಳೆದ ಬಾರಿ ಮಾಹಿತಿ ಒದಗಿಸಿದ 21 ವಧುಗಳ ಅರ್ಜಿಗಳನ್ನು ಉಪ ನೋಂದಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈ ಬಾರಿ 25 ಯುವತಿಯರು ಸರ್ಕಾರದ ತಲಾ 10 ಸಾವಿರ ರೂಪಾಯಿಗಳ ಸೌಲಭ್ಯ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದರು.

ಈ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯೋಜನ ಪಡೆಯಲು ಬಡ ಹಾಗೂ ಅನಾಥ ಮುಸ್ಲಿಂ ಯುವತಿಯರ ಪೋಷಕರು ಅರ್ಜಿಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಪಡೆದು ಫೆ. 20ರೊಳಗಾಗಿ ಸಲ್ಲಿಸಲು ಕೋರಲಾಗಿದೆ. ಫೆ. 25ರಂದು ಅರ್ಜಿಗಳ ಪರಿಶೀಲನೆ ನಡೆಯಲಿದೆ. ಮಾರ್ಚ್ 6ರಂದು ಆಯ್ಕೆಯಾದವರ ಪಟ್ಟಿಯನ್ನು ಅಲ್-ಅಮೀನ್ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಅರ್ಜಿ ಲಭ್ಯವಾಗುವ ಸ್ಥಳ: ಮಡಿಕೇರಿ- ನೇತ್ರಾ ಆಪ್ಟಿಕಲ್ಸ್, ಮಹದೇವಪೇಟೆ (9844464196); ಸೋಮವಾರಪೇಟೆ: ವಾಲ್ಕ್ ವೆನ್ ವೇರ್ ಶೂ ಶಾಪ್ (9448585556); ವಿರಾಜಪೇಟೆ: ನೌಫಲ್ ಫ್ರೂಟ್ ಸ್ಟಾಲ್, ಬಸ್ ನಿಲ್ದಾಣ (9035186513); ಕುಶಾಲನಗರ: ಝೀಬಾ ಡ್ರೆಸಸ್, ರಥ ಬೀದಿ (9900500184); ನಾಪೋಕ್ಲು: ಶಮ ಮೆಡಿಕಲ್ಸ್ (9880897122); ಶನಿವಾರಸಂತೆ: ಅಬ್ದುಲ್ಲ, ಸೂರ್ಯ ಟಿಂಬರ್, ಗೋಪಾಲಪುರ: (9448561157); ನೆಲ್ಯಹುದಿಕೇರಿ: ಎ.ಕೆ. ಹಕೀಂ (9448354568).
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಎಂ.ಎಚ್. ನೂರುದ್ದೀನ್, ಪ್ರಧಾನ ಕಾರ್ಯದರ್ಶಿ ಕೆ.ವೈ. ಖುರೇಷಿ, ನಿರ್ದೇಶಕ ಹಸನ್ ಕುಂಞ ಹಾಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.