ADVERTISEMENT

ಮೈದುಂಬಿ ಹರಿದ ಕಾಜೂರು ಹೊಳೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 12:07 IST
Last Updated 12 ಜೂನ್ 2018, 12:07 IST

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಸೋಮವಾರ ಧಾರಾಕಾರ ಮಳೆಯಾಗಿದೆ. ಮುಂಜಾನೆಯಿಂದಲೇ ಆರಂಭವಾದ ಮಳೆ ಮಧ್ಯಾಹ್ನದವರೆಗೆ ಬಿಡುವು ನೀಡದೇ ಸುರಿಯಿತು. ನಂತರ ಸಂಜೆಯವರೆಗೂ ಮಧ್ಯೆಮಧ್ಯೆ ಬಿಡುವು ನೀಡುತ್ತಾ ಜೋರಾಗಿ ಸುರಿಯುತ್ತಿತ್ತು. ಒಟ್ಟು 3 ಇಂಚು 25 ಸೆಂಟ್ ಮಳೆಯಾಗಿದೆ.

ಒಂದೇ ಸಮನೇ ಸುರಿಯುತ್ತಿರುವ ಮಳೆಯಿಂದ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ ಆಗಾಗ್ಗೆ ಕಡಿತಗೊಳ್ಳುತ್ತಿದೆ. ಬೀಸುತ್ತಿರುವ ಭಾರಿ ಗಾಳಿಯಿಂದ ವಾತಾವರಣದಲ್ಲಿ ಶೀತ ಅಧಿಕವಾಗಿದ್ದು, ಚಳಿಗಾಲದ ಚಳಿಯ ಅನುಭವವಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಹೊಳೆಕೆರೆಗಳು ತುಂಬಿ ಹರಿಯುತ್ತಿವೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಹೊಳೆ ಮೈದುಂಬಿ ಹರಿಯುತ್ತಿದೆ. ರೈತಾಪಿವರ್ಗದಲ್ಲಿ ಇದು ಹರ್ಷ ತುಂಬಿದೆ.

ADVERTISEMENT

‘ಮೇ 25ರಿಂದಲೇ ಆರಂಭವಾದ ಮಳೆ 2ನೇ ಹಂತದ ಚೆಂಡು ಹೂವಿನ ಬೆಳೆಗೆ ಹಾನಿ ಉಂಟುಮಾಡಿ ನಷ್ಟ ಅನುಭವಿಸಬೇಕಾಯಿತು. ಮೆಣಸಿನ ಕಾಯಿ ಬೆಳೆ ಮುಕ್ತಾಯ ಹಂತಕ್ಕೆ ಬಂದಿದ್ದು, ಈ ವರ್ಷ ಉತ್ತಮ ದರ ದೊರೆಯದೇ ನಿರಾಶೆಯಾಯಿತು. ಭತ್ತದ ವ್ಯವಸಾಯಕ್ಕಾದರೂ ಅನುಕೂಲವಾಗುವುದೆಂಬ ಭರವಸೆ ಯಿಂದ ಗದ್ದೆಯ ಕೆಲಸದತ್ತ ಗಮನ ಹರಿಸಬೇಕಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದೊಡ್ಡಬಿಳಾಹ ಗ್ರಾಮದ ರೈತ ಬಿ.ಎಂ.ಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.