ADVERTISEMENT

ರಸ್ತೆ ದುರಸ್ತಿಗೆ ಆಗ್ರಹ: ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 8:50 IST
Last Updated 19 ಜನವರಿ 2011, 8:50 IST

ಕುಶಾಲನಗರ: ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಗುಡ್ಡೆಹೊಸೂರು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕಾವಲು ಪಡೆಯ ಅಧ್ಯಕ್ಷ ಎಂ.ಕೃಷ್ಣ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಗುಡ್ಡೆಹೊಸೂರು ಬಳಿಯ ಹಾರಂಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ತೀವ್ರ ಹದಗೆಟ್ಟಿರುವ ರಸ್ತೆಯ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದರು.

ನೀರಾವರಿ ಇಲಾಖೆಗೆ ಸೇರಿದ ಈ ರಸ್ತೆ ಅಭಿವೃದ್ಧಿಗೆ ಇಲಾಖೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಖಾಸಗಿ ಬಸ್‌ಗಳು ಹಾರಂಗಿ ಮಾರ್ಗವಾಗಿ ಸಂಚರಿಸಬೇಕೆಂಬ ನಿಯಮವಿದ್ದರೂ ಈ ಮಾರ್ಗದಲ್ಲಿ ಓಡಾಡುತ್ತಿಲ್ಲ. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಈ ಭಾಗದ ಗ್ರಾಮಸ್ಥರಿಗೆ ಮತ್ತು ಶಾಲಾ ಮಕ್ಕಳಿಗೆ ಅಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಆನಂತರ ರಸ್ತೆ ದುರಸ್ತಿಗೊಳಿಸಬೇಕು ಎಂಬ ಮನವಿ ಪತ್ರವನ್ನು ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಕೃಷ್ಣಮೂರ್ತಿ ಅವರಿಗೆ ಸಲ್ಲಿಸಲಾಯಿತು. ಕಾವಲು ಪಡೆಯ ಹೋಬಳಿ ಘಟಕದ ಅಧ್ಯಕ್ಷ ಮಂಜು, ಸಂಘಟನಾ ಕಾರ್ಯದರ್ಶಿ ಬಿ.ಕೆ. ಮೋಹನ್ ಮುಖಂಡರಾದ ಕೃಷ್ಣ, ನಾಗೇಶ್, ನವೀನ್, ರವಿ, ಚೆಲುವರಾಜು, ಅಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.