ADVERTISEMENT

ರಸ್ತೆ ಬದಿಯಲ್ಲಿ ಅನವಶ್ಯಕ ಸೂಚನಾ ಫಲಕ

ಜಿಲ್ಲಾ ಪಂಚಾಯಿತಿ ವಿರುದ್ಧ ಕಟ್ಟೆಮಾಡು ಗ್ರಾಮಸ್ಥರಿಂದ ಪ್ರತಿಭಟನೆ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 11:02 IST
Last Updated 31 ಮಾರ್ಚ್ 2018, 11:02 IST

ನಾಪೋಕ್ಲು: ಹದಗೆಟ್ಟಿರುವ ರಸ್ತೆ ದುರಸ್ತಿಗೆ ಗಮನ ಹರಿಸದೆ ರಸ್ತೆ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿರುವ ಜಿಲ್ಲಾ ಪಂಚಾಯಿತಿ ಕ್ರಮ ವಿರೋಧಿಸಿ ಸಮೀಪದ ಕಟ್ಟೆಮಾಡು ಗ್ರಾಮಸ್ಥರು ಗುರುವಾರ ಮೌನ ಪ್ರತಿಭಟನೆ ನಡೆಸಿದರು.ಕಟ್ಟೆಮಾಡು ಗ್ರಾಮದ ಜಂಕ್ಷನ್ ಬಳಿ ಶುಕ್ರವಾರ ಬೆಳಿಗ್ಗೆ ಸುಮಾರು 50ಕ್ಕೂ ಅಧಿಕ ಗ್ರಾಮಸ್ಥರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಕಟ್ಟೆಮಾಡು ಗ್ರಾಮದ ಬಿದ್ರುಪಣೆ, ತೋಟಂಬೈಲು, ಗುಡ್ಡೆರ, ದೇವಜನ, ಕಟ್ಟೆಮನೆ, ಪಾರೇರ ಹಾಗೂ ಪಾರೆಮಜಲು ಕುಟುಂಬಗಳಿಗೆ ಸಾಗುವ ರಸ್ತೆ ಸುಮಾರು 2.5 ಕಿ.ಮೀ. ಇದ್ದು, ಅಲ್ಪ ಸ್ವಲ್ಪ ಡಾಂಬರೀಕರಣಗೊಂಡಿದೆ. ಇನ್ನುಳಿದ ರಸ್ತೆಯು ಡಾಂರೀಕರಣಗೊಳ್ಳದೇ ಕಲ್ಲು ರಸ್ತೆಯಿಂದ ಕೂಡಿದ್ದು ಸಂಪೂರ್ಣ ಗುಂಡಿಮಯವಾಗಿದೆ. ನಿತ್ಯ ಶಾಲಾ ಮಕ್ಕಳು, ಶಾಲಾ ವಾಹನಗಳು, ಪಾದಚಾರಿಗಳು ಸಂಚಾರಕ್ಕೆ ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ರಸ್ತೆ ತೀರಾ ಹದಗೆಟ್ಟಿರುವುದರಿಂದ ಈ ಭಾಗದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

ಮಾರ್ಚ್‌ 18ರಂದು ಜಿಲ್ಲಾ ಪಂಚಾಯಿತಿಯಿಂದ ಹದಗೆಟ್ಟಿರುವ ರಸ್ತೆಯ ಬದಿಗಳಲ್ಲಿ ಸುಮಾರು 23ಕ್ಕೂ ಅಧಿಕ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಹದಗೆಟ್ಟಿರುವ ರಸ್ತೆಗೆ ಸೂಚನಾ ಫಲಕಗಳ ಅವಶ್ಯಕತೆ ಇದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿ ಈ ಕಾಮಗಾರಿಗೆ ₹ 2.5 ಲಕ್ಷ ವೆಚ್ಚ ಮಾಡಿದ್ದು ಸೂಚನಾ ಫಲಕಗಳನ್ನು ಅಳವಡಿಸುವ ಈ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಗಮನಕ್ಕೆ ತಾರದೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಅವರಿಗೆ ಈ ಕುರಿತು ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಮುಂದೆ ಸೂಚನಾ ಫಲಕ ಅಳವಡಿಕೆ ಕಾಮಗಾರಿ ಕುರಿತು ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಚುನಾವಣೆ ಬಹಿಷ್ಕಾರ: ಒಂದುಗಂಟೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಏ. 30ರ ಒಳಗೆ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು. ಇಲ್ಲದಿದ್ದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ವಿಶ್ವನಾಥ್, ಪೊನ್ನಪ್ಪ, ಬಸಪ್ಪ, ಪ್ರದೀಪ್, ಉಲ್ಲಾಸ, ಧನುಕುಮಾರ್, ಗಿರೀಶ್, ಮೊಟ್ಟಯ್ಯ, ಮೋಹನ್ ಕುಮಾರ್, ಕೇಶವ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.