ADVERTISEMENT

ರಸ್ತೆ ವಿಸ್ತರಣೆಗೆ ಸರ್ವೆ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 9:07 IST
Last Updated 26 ಸೆಪ್ಟೆಂಬರ್ 2013, 9:07 IST

ಕುಶಾಲನಗರ: ಇಲ್ಲಿಯ ಪ್ರಮುಖ ರಸ್ತೆಯಾದ ರಥಬೀದಿಯ ವಿಸ್ತರಣೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಅವರ ನೇತೃತ್ವದಲ್ಲಿ ಬುಧವಾರ ಅಂತಿಮ ರೂಪುರೇಷೆ ಸಿದ್ಧಗೊಳಿಸಲಾಯಿತು.

ತಿಮ್ಮಪ್ಪ ಮಾತನಾಡಿ ರಸ್ತೆ ಮಧ್ಯಭಾಗದಿಂದ 5.5 ಮೀಟರ್ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇದರಿಂದ  ವ್ಯಾಪಾರಸ್ಥರಿಗೆ ಅನಾನುಕೂಲವಾಗುತ್ತದೆ. ಇದಕ್ಕೆ ಯಾರೂ ಬೇಸರ ವ್ಯಕ್ತಪಡಿಸದೇ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ನಗರೋತ್ಥಾನ ಇಲಾಖೆಯಿಂದ ಬಿಡುಗಡೆಯಾಗಿರುವ 84.4 ಲಕ್ಷ ರೂಪಾಯಿಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆಯಲಿದ್ದು, ತಿಂಗಳ ಕೊನೆಯಿಂದ ಕಾಮಗಾರಿ ಆರಂಭವಾಗಿ 1 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಇಲ್ಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆ ಮಾಡಲು ಒಂದುವರೆ ತಿಂಗಳ ಹಿಂದೆ ಸರ್ವೆ ಮಾಡಿ ಜಾಗ ಗುರುತಿಸಲಾಗಿತ್ತು.

ಆದರೆ ವ್ಯಾಪಾರಸ್ಥರು ಮತ್ತು ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಸ್ವಲ್ಪ ಭಾಗವನ್ನು ತೆರವುಗೊಳಿಸಲು 40 ದಿನಗಳ ಕಾಲಾವಕಾಶ ಕೇಳಿದ್ದರಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ವ್ಯಾಪಾರಸ್ಥರು ಸ್ವತಃ ತಾವೇ ಮಳಿಗೆಗೆಗಳ ಸ್ವಲ್ಪ ಭಾಗವನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಪಂಚಾಯಿತಿ ಎಂಜಿನಿಯರ್ ಶ್ಯಾಮ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಮಧುಸೂದನ್, ಎಚ್.ಡಿ. ಚಂದ್ರು, ಎಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಬಾಬು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.