ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಎರಡು ತಿಂಗಳ ಹಿಂದೆ ನಡೆದಿದೆ ಎನ್ನಲಾದ 37 ಲಕ್ಷ ರೂಪಾಯಿ ಅವ್ಯವಹಾರ ಕುರಿತು ಲೋಕಾಯುಕ್ತ ಪೊಲೀಸರು ಸೋಮವಾರ ಪಂಚಾಯಿತಿಯಲ್ಲಿ ತನಿಖೆ ನಡೆಸಿದರು.
ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₨ 37 ಲಕ್ಷ ಅವ್ಯವಹಾರ ನಡೆದಿದೆ ಎಂದು ಕೆಲ ದಿನಗಳ ಹಿಂದೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸೋಮವಾರ ಪಂಚಾಯಿತಿಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್‌ಪಿ ವಿಜಯ್ ಗೋಪಾಲ್ ನೇತೃತ್ವದ ತಂಡವು ದಾಖಲೆಗಳ ಪರಿಶೀಲನೆ ನಡೆಸಿತು.
ಬೆಳಿಗ್ಗೆ 10 ಗಂಟೆಗೆ ಪಂಚಾಯಿತಿಗೆ ಭೇಟಿ ನೀಡಿದ ಲೋಕಾಯುಕ್ತ ತಂಡವು ಸಂಜೆ 4 ಗಂಟೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿತು. ಅಲ್ಲದೇ, ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಹಿಂದಿನ ಅಭಿವೃದ್ಧಿ ಅಧಿಕಾರಿ ಮಂಜ್ರೂರ್ ಖಾನ್ ಅವರನ್ನು ತಂಡವು ವಿಚಾರಣೆ ನಡೆಸಿತು.
ಪರಿಶೀಲನೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ತಂಡವು, ಈ ಹಿಂದೆಯೇ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಕಡತಗಳನ್ನು ವಶಪಡಿಸಿಕೊಂಡು ಇಲಾಖೆಯ ವಶದಲ್ಲಿಟ್ಟಿದ್ದರು. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿತು.
ಕೊಡಗು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್, ಲೋಕಾಯುಕ್ತ ಇನ್‌ಸ್ಪೆಕ್ಟರ್ ಪರಶುರಾಮ್ ಸೇರಿದಂತೆ ತಂಡದಲ್ಲಿ 8 ಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.