ADVERTISEMENT

ವೈದ್ಯಕೀಯ ಕಾಲೇಜಿಗೆ ಶೀಘ್ರವೇ ಅನುಮತಿ- ಭರವಸೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 4:30 IST
Last Updated 16 ಆಗಸ್ಟ್ 2012, 4:30 IST
ವೈದ್ಯಕೀಯ ಕಾಲೇಜಿಗೆ ಶೀಘ್ರವೇ ಅನುಮತಿ- ಭರವಸೆ
ವೈದ್ಯಕೀಯ ಕಾಲೇಜಿಗೆ ಶೀಘ್ರವೇ ಅನುಮತಿ- ಭರವಸೆ   

ಮಡಿಕೇರಿ: ಜಿಲ್ಲೆಯಲ್ಲಿ ಶೀಘ್ರವೇ ವೈದ್ಯಕೀಯ ಕಾಲೇಜು ಆರಂಭಿಸಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ತೀವ್ರ ನಿಗಾ ಘಟಕ (ಐಸಿಯು) ಹಾಗೂ ಡಯಾಲಿಸಿಸ್ ಕೇಂದ್ರವನ್ನು ಬುಧವಾರ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

ಇಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ಜನತೆಯ ಸಮಸ್ಯೆ ಅರಿತು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಬೇಕೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರು ಮಾತನಾಡಿ, ಹಲವು ದಶಕಗಳಿಂದ ಸೇವೆ ನೀಡುತ್ತಿರುವ ನಗರದ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡವಿದ್ದು, ಸಾರ್ವಜನಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದರು.

ಮುಂದಿನ ದಿನಗಳಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಹಲವು ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು ಮತ್ತು ಡಯಾಲಿಸಿಸ್ ಘಟಕದ ಆರಂಭದಿಂದಾಗಿ ರೋಗಿಗಳು ಹೊರ ಜಿಲ್ಲೆಗೆ ಹೋಗುವ ಪರಿಸ್ಥಿತಿ ದೂರವಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು  ಎಂದು ಹೇಳಿದರು.

ಐಸಿಯು ಮತ್ತು ಡಯಾಲಿಸಿಸ್ ಘಟಕದ ಆರಂಭಕ್ಕಾಗಿ ಶ್ರಮಿಸಿದ  ನಿವೃತ್ತ ವೈದ್ಯಾಧಿಕಾರಿ ಡಾ. ಪಾಲೇಕರ್ ಅವರನ್ನು ಸನ್ಮಾನಿಸಲಾಯಿತು. 

ಜಿಲ್ಲಾಧಿಕಾರಿ ಡಾ.ಶಿವಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಜನಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮುತ್ತಪ್ಪ, ಕೆ.ಟಿ.ಬೇಬಿ ಮ್ಯಾಥ್ಯು, ರಮೇಶ್ ಹೊಳ್ಳ, ರವಿ ಬಸಪ್ಪ ಇದ್ದರು.
 

ಐಸಿಯು-ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗಳು ಡಯಾಲಿಸಿಸ್‌ಗಾಗಿ ವಾರಕ್ಕೆರಡು ಬಾರಿ ಹೊರ ಜಿಲ್ಲೆಗಳಿಗೆ ತೆರಳುವುದು ಅನಿವಾರ್ಯವಾಗಿತ್ತು. ನಗರದ ಜಿಲ್ಲಾಸ್ಪತ್ರೆಯಲ್ಲಿಯೇ ಈಗ ಡಯಾಲಿಸಿಸ್ ಕೇಂದ್ರ ತೆರೆದಿರುವ ಕಾರಣ ಇಂತಹ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಆರಂಭವಾಗಿರುವ ಡಯಾಲಿಸಿಸ್ ಘಟಕವು 6 ಹಾಸಿಗೆಗಳನ್ನೊಳಗೊಂಡಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಬಿಪಿಎಲ್ ಚೀಟಿ ಇಲ್ಲದವರು 350 ರೂಪಾಯಿ ನೀಡಿ ಈ ಸೌಲಭ್ಯ ಪಡೆಯಬಹುದಾಗಿದೆ.

ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಪಡೆದ ವೈದ್ಯಾಧಿಕಾರಿಗಳು ಮತ್ತು ದಾದಿಯರನ್ನು ಈಗಾಗಲೇ ನಿಯೋಜಿಸಲಾಗಿದ್ದು, ಡಯಾಲಿಸಿಸ್ ಘಟಕದಲ್ಲಿ ಡಾ. ಹಿರಿಕರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಐಸಿಯು ಘಟಕವು 6 ಹಾಸಿಗೆಗಳನ್ನೊಳಗೊಂಡಿದ್ದು,  ಇಲ್ಲಿ ಅರವಳಿಕೆ ತಜ್ಞ ಡಾ. ನಾಗೇಶ್ ಮತ್ತು ಡಾ. ಅಬ್ದುಲ್ ಅಜೀಜ್ ಮತ್ತಿತರರು ನುರಿತ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT