ADVERTISEMENT

ವ್ಯಾಪಾರಿ ಕೊಲೆ: ಪರಿಶೀಲನೆ ವೇಳೆ ಕಲ್ಲು ತೂರಾಟ-18 ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:35 IST
Last Updated 13 ಫೆಬ್ರುವರಿ 2012, 8:35 IST

ತಿ.ನರಸೀಪುರ: ಪಟ್ಟಣದಲ್ಲಿ ಈಚೆಗೆ ನಡೆದ ವ್ಯಾಪಾರಿ ಆಸೀಫ್ ಅಲಿ ಕೊಲೆಗೆ ಸಂಬಂಧಿಸಿದಂತೆ ಶನಿವಾರ ಸಂಜೆ ಸ್ಥಳ ಪರಿಶೀಲನೆಗೆ ಬಂದಿದ್ದ ಪೊಲೀಸ್ ಜೀಪ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಘಟನೆಯಲ್ಲಿ 9 ಮಂದಿ ಪೊಲೀಸರು ಗಾಯಗೊಂಡಿದ್ದು, ಸಿಪಿಐ ಅವರ ಜೀಪ್ ಜಖಂಗೊಂಡಿದೆ. ಈ ಸಂಬಂಧ ಭಾನುವಾರ ಬೆಳಿಗ್ಗೆ ಪೊಲೀಸರು 18 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಿಯಾಜ್ ಅಹಮದ್, ತುಫೆಲ್, ಮೊಹಮದ್ ಜಕ್ರಿಯಾ, ಅಫಿಜುಲ್ಲಾ, ಫಜಿಲಾ, ಜಿಯಾಉಲ್ಲಾ, ಏಜಾಜ್ ಪಾಷಾ, ಅಸ್ಮತ್ ಉಲ್ಲಾ, ಆಸಿಫ್, ಮಹಮದ್ ಜಿಯಾ, ರಿಜ್ವಾನ್ ಪಾಷಾ, ಅಜಾಂ ಪಾಷಾ, ಹುಸೇನ್, ಜಾಫರ್, ಸಮೀಉಲ್ಲಾ, ಇಂತಿಯಾಜ್, ನವೀದ್ ಹಾಗೂ ಹೈದರಾಲಿ ಬಂಧಿತರು.
 
ಜಫ್ರುಲ್ಲಾ ಎಂಬ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಎಲ್ಲರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ ಫೆ. 25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಸಂಬಂಧ ಪ್ರಮುಖ ಆರೋಪಿ ನಿತಿನ್‌ಸಿಂಗ್ ಅಂಗಡಿಯನ್ನು ಪರಿಶೀಲಿಸಿ ಅಗತ್ಯ ದಾಖಲೆ ಪಡೆಯಲು ಶನಿವಾರ ರಾತ್ರಿ ಪೊಲೀಸರು ಮುಂದಾದರು. ಈ ವೇಳೆ ನಿತಿನ್ ಸಿಂಗ್‌ನನ್ನೂ ಮಹಜರಿಗೆ ಕರೆದುಕೊಂಡು ಬರಲಾಗಿತ್ತು. ನಂತರ ಆತನ ಕುಟುಂದವರನ್ನು ಕರೆಯಿಸಿ ಅಂಗಡಿ ತೆಗೆದು ಪರಿಶೀಲಿಸಲಾಯಿತು.

ಈ ವೇಳೆ ಅಲ್ಲಿಗೆ ಬಂದ ಕೆಲ ಮುಸ್ಲಿಂ ಯವಕರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಆರೋಪಿ ನಿತಿನ್ ಕುಟುಂಬದವರು ಅಂಗಡಿ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ ಎಂಬ ಸುದ್ದಿ ಹರಡಿ ಅನೇಕ ಜನ ಸ್ಥಳದಲ್ಲಿ ಜಮಾಯಿಸಿದರು.

ಈ ವೇಳೆ ಪೊಲೀಸರು ದಾಖಲೆ ಪಡೆಯಲು ಬಂದಿರುವುದಾಗಿ ತಿಳಿಸಿದರೂ ಅಕ್ರೋಶಗೊಂಡ ಕೆಲವರು ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ 9 ಮಂದಿ ಪೊಲೀಸರು ಗಾಯಗೊಂಡರು. ಸಿಪಿಐ ಅವರ ಜೀಪ್ ಜಖಂಗೊಂಡಿತು.

ಎಷ್ಟೇ ಮನವಿ ಮಾಡಿದರೂ ಗಲಾಟೆ, ಜನ ಸಂದಣಿ ಕಡಿಮೆಯಾಗಲಿಲ್ಲ. ಅನಿವಾರ್ಯವಾಗಿ ಪೊಲೀಸರು ಗಾಳಿಯಲ್ಲಿ ರಬ್ಬರ್ ಗುಂಡುಗಳನ್ನು ಹಾರಿಸಿದರು. ಅಶ್ರುವಾಯು, ಟಿಯರ್ ಗ್ಯಾಸ್ ಕೂಡ ಸಿಡಿಸಿ ಜನರನ್ನು ಚದುರಿಸಿದರು.

ವಿಷಯ ತಿಳಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ್, ಡಿವೈಎಸ್‌ಪಿ ವಿಜಯ್‌ಕುಮಾರ್, ವೃತ್ತ ನಿರೀಕ್ಷಕ ಕೆ.ಎಸ್. ಸುಂದರರಾಜ್, ಪಿಎಸ್‌ಐ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಿಸಿದರು.

ಭಾನುವಾರ ಬೆಳೆಗ್ಗೆಯಿಂದ ಶಾಂತಿಯುತ ವಾತವರಣ ಇತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.