ADVERTISEMENT

ಶಿವನಸಮುದ್ರ: ಮಾರಮ್ಮನ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:34 IST
Last Updated 4 ಏಪ್ರಿಲ್ 2013, 6:34 IST

ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರ ಗ್ರಾಮದ ಆದಿಶಕ್ತಿ ಮಾರಮ್ಮನ ಹಬ್ಬದ ಅಂಗವಾಗಿ ಬುಧವಾರ ವಿವಿಧ ದೇವರುಗಳ ಉತ್ಸವ ಸಂಭ್ರಮದಿಂದ ನೆರವೇರಿತು.

ಶಿವನಸಮುದ್ರ ಬಳಿಯ ಹಳೇ ಸೇತುವೆ ಬಳಿಯ ಕಾವೇರಿ ನದಿಯಿಂದ ದೇವರುಗಳನ್ನು ಹೂವು, ಹೊಂಬಾಳೆ ಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಪ್ರಾರಂಭಿಸಲಾಯಿತು.

ಉತ್ಸವದ ಮೆರವಣಿಗೆಯಲ್ಲಿ ನೀಲಕೋಲು, ಬೀರದೇವರು, ಸತ್ತೆಗೆ, ಕಡೆಗದ್ದಪ್ಪನ ಪೆಟ್ಟಿಗೆಗಳು ಪಾಲ್ಗೊಂಡವು. ರಂಗಕುಣಿತ, ಮಂಗಳ ವಾದ್ಯದೊಡನೆ ಮೆರೆವಣಿಗೆ ಉದ್ದಕ್ಕೂ ಕಿಕ್ಕಿರಿದು ಸೇರಿದ್ದ ಭಕ್ತರು ಜಯಘೋಷ ಮೊಳಗಿಸಿದರು.

ಹಬ್ಬದ ಅಂಗವಾಗಿ ಶಿವನಸಮುದ್ರ ಮುಖ್ಯ ರಸ್ತೆ, ಆದಿಶಕ್ತಿ ಮಾರಮ್ಮ ದೇವಾಲಯವನ್ನು ಬಣ್ಣ ಬಣ್ಣದ ಹೂವು, ತಳಿರುತೋರಣ ಹಾಗೂ ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಂಗಳೂರು, ಮೈಸೂರು, ಮಂಡ್ಯ, ಮಳವಳ್ಳಿ ಸೇರಿದಂತೆ ಇತರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಉಪವಿಭಾಗಾಧಿಕಾರಿ ಎಚ್.ಎನ್. ಸತೀಶ್‌ಬಾಬು ಮಾರ್ಗದರ್ಶನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ರಂಗನಾಥಸ್ವಾಮಿ ದೇವಾಲಯ ಅರ್ಚಕ ಶ್ರೀಧರ್, ಚಿಕ್ಕರಾವಳಯ್ಯ ಪೂಜೆ ನಡೆಸಿಕೊಟ್ಟರು. ಗ್ರಾಮದ ಮುಖಂಡರಾದ ಮದರ್, ರಾಚೇಗೌಡ, ನಿಂಗಯ್ಯ, ಕರಗಯ್ಯ, ನಾಗಣ್ಣ, ಮಲ್ಲಾಜಮ್ಮ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.