ADVERTISEMENT

ಶಿಸ್ತಿನ ಸಿಪಾಯಿ ಕಾರ್ಯಪ್ಪ ಜನ್ಮದಿನ ಇಂದು

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:50 IST
Last Updated 28 ಜನವರಿ 2012, 10:50 IST

ಮಡಿಕೇರಿ: ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 113ನೇ ಜನ್ಮದಿನಾಚರಣೆ ಶನಿವಾರ (ಜ.28) ನಡೆಯಲಿದ್ದು, ನಗರದ ಕೆ.ಎಂ. ಕಾರ್ಯಪ್ಪ ವೃತ್ತದ ಬಳಿ ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ. 

ಇದೇ ಮೊದಲ ಬಾರಿಗೆ ಸಾರ್ವತ್ರಿಕವಾಗಿ ಕಾರ್ಯಪ್ಪ ಅವರ ಜನ್ಮದಿನಾಚರಣೆ ಆಚರಿಸಲಾಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಅಕಾಡೆಮಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಫೋರಂ ಇದಕ್ಕೆ ಕೈಜೋಡಿಸಿವೆ.

ವಿಶೇಷ ಅತಿಥಿಯಾಗಿ ಲೆಫ್ಟಿನೆಂಟ್ ಜನರಲ್ ಆದಿತ್ಯ ಕುಮಾರ್ ಸಿಂಗ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಡಗಿನ ನಾಲ್ವರು ಸಾಧಕರನ್ನು ಗೌರವಿಸಲಾಗುವುದು ಎಂದು ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ ಹೇಳಿದರು.

ಫೀ.ಮಾ. ಕೆ.ಎಂ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಂಡೇಪಂಡ ಪುಷ್ಪಾ ಕುಟ್ಟಣ್ಣ, ಕಾಫಿ ಉದ್ದಿಮೆ ರಕ್ಷಣೆಗಾಗಿ ಶ್ರಮಿಸಿದ ಕೆ.ಸಿ. ರಾಮಮೂರ್ತಿ, ಸಿ.ಎಂ. ಪೆಮ್ಮಯ್ಯ ಹಾಗೂ ಸಮಾಜ ಸೇವಕ ಡಾ. ಮುಕ್ಕಾಟೀರ ಎಂ. ಚಂಗಪ್ಪ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಕೆ.ಸಿ. ರಾಮಮೂರ್ತಿ ಹಾಗೂ ಡಾ. ಮುಕ್ಕಾಟೀರ ಎಂ. ಚಂಗಪ್ಪ ನಿಧನರಾಗಿರುವುದರಿಂದ ಅವರ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ.

ಕವಾಯತು ಸ್ಪರ್ಧೆ: ಜನ್ಮ ದಿನಾಚರಣೆ ಅಂಗವಾಗಿ ಇಂದು ಕೋಟೆ ಆವರಣದಲ್ಲಿ ಜಿಲ್ಲೆಯ ವಿವಿಧ ಎನ್.ಸಿ.ಸಿ. ಕಲಾತಂಡಗಳಿಂದ ಕವಾಯತು ಸ್ಪರ್ಧೆ ನಡೆಯಿತು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪೋರಂ ವತಿಯಿಂದ ನಡೆದ ಈ ಸ್ಪರ್ಧೆಯಲ್ಲಿ ಅಚ್ಚುಕಟ್ಟಾದ ಉಡುಗೆ, ಶಿಸ್ತು ಬದ್ಧ  ಕವಾಯತು ಅತ್ಯಾಕರ್ಷಕವಾಗಿತ್ತು. ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸಹ ಇದನ್ನು ವೀಕ್ಷಿಸಿದರು. ಜ.28 ರಂದು ಬೆಳಿಗ್ಗೆ 8 ಗಂಟೆಗೆ ಕೋಟೆ ವಿಧಾನ ಸಭಾಂಗಣ ಆವರಣದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ನಂತರ ಜಿಲ್ಲೆಯ 16 ತಂಡಗಳ ನಡುವೆ ರಾಷ್ಟ್ರಗೀತೆ ಗಾಯನ ಸ್ಪರ್ಧೆ ನಡೆಯಲಿದೆ.
ಬೆಳಿಗ್ಗೆ 9 ಗಂಟೆಯಿಂದ ಕೋಟೆಯ ವಿಧಾನ ಸಭಾಂಗಣದಿಂದ ವಿದ್ಯಾರ್ಥಿಗಳು, ಜಿಲ್ಲಾ ಪೊಲೀಸ್ ತುಕಡಿಗಳು ಪಥಸಂಚಲನದ ಮೂಲಕ  ಬೆಳಿಗ್ಗೆ 9.45 ಕ್ಕೆ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ಬಳಿ ತೆರಳುವರು. ಸರಿಯಾಗಿ 9.50ಕ್ಕೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.