ADVERTISEMENT

ಸಮಯ ಪ್ರಜ್ಞೆ ಅರಿತು ಕೆಲಸ ನಿರ್ವಹಿಸಲು ಕರೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 9:00 IST
Last Updated 3 ಏಪ್ರಿಲ್ 2011, 9:00 IST
ಸಮಯ ಪ್ರಜ್ಞೆ ಅರಿತು ಕೆಲಸ ನಿರ್ವಹಿಸಲು ಕರೆ
ಸಮಯ ಪ್ರಜ್ಞೆ ಅರಿತು ಕೆಲಸ ನಿರ್ವಹಿಸಲು ಕರೆ   

ಮಡಿಕೇರಿ: ಪೊಲೀಸರು ನಿಷ್ಠೆ ಮತ್ತು ಸಮಯ ಪ್ರಜ್ಞೆ ಅರಿತು ಕೆಲಸ ಮಾಡಬೇಕು ಎಂದು ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಎಚ್.ಎಂ. ವೆಂಕಟಪ್ಪ ಸಲಹೆ ಮಾಡಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿ ವಿತರಣೆ ಮತ್ತು ನಿವೃತ್ತ ಪೊಲೀಸರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 

‘ಪೊಲೀಸರು ಯಾವುದೇ ಒತ್ತಡಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು. ಇದರಿಂದ ಸಮಾಜ ಹಾಗೂ ಇಲಾಖೆಗೆ ಹೆಚ್ಚಿನ ಗೌರವ ಸಿಗಲಿದೆ. ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಯೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.‘ಪೊಲೀಸರಿಗೆ ವೈದ್ಯಕೀಯ ಸೌಲಭ್ಯ ಹೆಚ್ಚಿಸುವುದರ ಜತೆಗೆ, ಕೇಂದ್ರ ಸ್ಥಾನದಲ್ಲಿ ವಸತಿ ಸೌಲಭ್ಯ ಒದಗಿಸುವಂತಾಗಬೇಕು. ಇದರಿಂದ ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ’ ಎಂದರು.
 

‘ಪೊಲೀಸರು ಆಧುನಿಕ ವ್ಯವಸ್ಥೆಗೆ ಹೊಂದಿಕೊಂಡು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಗಮನಹರಿಸಬೇಕು. ಅಂತೆಯೇ, ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಪೊಲೀಸರಲ್ಲಿ ಶಿಸ್ತು, ಸಂಯಮ ಬಹಳ ಮುಖ್ಯ’ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ ಮಾತನಾಡಿ, ಇಲಾಖೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಧ್ವಜವನ್ನು ಎಚ್.ಎಂ. ವೆಂಕಟಪ್ಪ ಬಿಡುಗಡೆ ಮಾಡಿದರು. 21 ಮಂದಿ ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು. ಅಲ್ಲದೆ, ನಿವೃತ್ತ ಪೊಲೀಸರಿಗೆ ವೈದ್ಯಕೀಯ ವೆಚ್ಚದ ಚೆಕ್ ವಿತರಿಸಲಾಯಿತು.
 

ADVERTISEMENT

ಅತ್ಯುತ್ತಮ ಸೇವೆ ಸಲ್ಲಿಸಿದ ವಿರಾಜಪೇಟೆ ನಗರ ಠಾಣೆಯ ಪೊಲೀಸ್ ಪೇದೆ ಟಿ.ಡಿ. ಮಂಜುನಾಥ ಹಾಗೂ ಸಿದ್ದಾಪುರ ಠಾಣೆಯ ಪೇದೆ ಎಚ್.ಸಿ. ಸುರೇಂದ್ರ ಅವರಿಗೆ ಸಮಾರಂಭದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿ ಪ್ರದಾನ ಮಾಡಲಾಯಿತು. ಹಾಗೆಯೇ, ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಜಿಲ್ಲಾ ಸಶಸ್ತ್ರ ಪಡೆಯ ಪೇದೆ ಜಿತೇಂದ್ರ ಅವರಿಗೆ ವಿಶೇಷ ಪ್ರಶಸ್ತಿ ವಿತರಿಸಲಾಯಿತು.
 

ಕಾರ್ಯಕ್ರಮದಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಸಿ. ನಂದ, ಗೃಹರಕ್ಷಕ ದಳದ ಕಮಾಂಡೆಂಟ್ ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ಡಿವೈಎಸ್‌ಪಿ ಜೆ.ಡಿ. ಪ್ರಕಾಶ್ ಸ್ವಾಗತಿಸಿದರು. ನಿವೃತ್ತ ಎಸ್ಪಿ ಅಯ್ಯಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.