ADVERTISEMENT

ಸಮಾಜವಾದಿ ಪಕ್ಷದ 14 ನಾಮಪತ್ರ ತಿರಸ್ಕೃತ

ಮಡಿಕೇರಿ ನಗರಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:32 IST
Last Updated 13 ಡಿಸೆಂಬರ್ 2013, 7:32 IST

ಮಡಿಕೇರಿ: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಸಮಾಜವಾದಿ ಪಕ್ಷದ 20 ಅಭ್ಯರ್ಥಿಗಳ ಪೈಕಿ 14 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಇದನ್ನು ಖಂಡಿಸಿ ಗುರುವಾರ ಸಂಜೆ ನಗರಸಭೆ ಆವರಣದಲ್ಲಿ ಪಕ್ಷದ ಕಾರ್ಯಕರ್ತರು, ಆಕಾಂಕ್ಷಿಗಳು ತೀವ್ರ ಪ್ರತಿಭಟನೆ ನಡೆಸಿದರು.

‘ಇಂದು ಬೆಳಿಗ್ಗೆ ನಾಮಪತ್ರಗಳನ್ನು ಸ್ವೀಕರಿಸಿ, ಡಿ. 14ರಂದು ಮಧ್ಯಾಹ್ನ ಪಕ್ಷದ ಚಿಹ್ನೆ ಪಡೆಯಲು ಬನ್ನಿ ಎಂದು ಚುನಾವಣಾಧಿಕಾರಿಗಳು ಸ್ವೀಕೃತಿ ಪತ್ರ ನೀಡಿದ್ದರು. ಆದರೆ, ಸಂಜೆ ವೇಳೆ ನಾಮಪತ್ರದಲ್ಲಿ ಐದು ಜನ ಸೂಚಕರ ಹೆಸರು ಇಲ್ಲವೆಂದು ನಾಮಪತ್ರಗಳನ್ನು ತಿರಸ್ಕೃತಗೊಳಿಸಿದ್ದಾರೆ’ ಎಂದು ವಾರ್ಡ್‌ 13ರ ಆಕಾಂಕ್ಷಿಯಾಗಿದ್ದ ಕೆ. ಅಪ್ಪಯ್ಯ ದೂರಿದರು.

‘ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ಒಬ್ಬ ಸೂಚಕರ ಹೆಸರು ಸಾಕೆಂದು ಚುನಾವಣಾ ಅಧಿಕಾರಿಗಳು ನಮ್ಮನ್ನು ದಾರಿ ತಪ್ಪಿಸಿದರು. ಆದರೆ, ಈಗ ಬೇರೆ ರಾಗ ಹಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ನನಗೆ ತಿಳಿದ ಮಟ್ಟಿಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಒಬ್ಬರ ಸೂಚಕರು ಇದ್ದರೆ ಸಾಕು, ಆದರೆ ಹೊಸ ಪಕ್ಷ/ಪ್ರಾದೇಶಿಕವಾದರೆ ಐದು ಜನ ಸೂಚಕರು ಬೇಕು. ಐದು ಜನ ಸೂಚಕರು ಬೇಕೆಂದು ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಮಗೆ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಲಿಲ್ಲ. ನಾಮಪತ್ರಗಳನ್ನು ಸ್ವೀಕರಿಸಿ, ಅದಕ್ಕೆ ಸ್ವೀಕೃತಿ ಪತ್ರವನ್ನು ಕೂಡ ಇಂದು ಬೆಳಿಗ್ಗೆ ನೀಡಿದ್ದರು’ ಎಂದು ಅವರು ಹೇಳಿದರು.

‘ನಾಮಪತ್ರ ಸ್ವೀಕೃತವಾಗಿದ್ದು, ಡಿ. 14ರಂದು ಚಿಹ್ನೆ ಪಡೆಯಲು ಬರುವಂತೆ ಅವರು ನೀಡಿರುವ ಸ್ವೀಕೃತಿ ಪತ್ರದ ಆಧಾರದ ಮೇಲೆ ನಾವು ನ್ಯಾಯಾಲಯದ ಮೆಟ್ಟಿಲು ಏರುವುದು ಖಚಿತ. ಚುನಾವಣಾ ಅಧಿಕಾರಿಗಳ ಈ ಕ್ರಮವನ್ನು ಖಂಡಿಸಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಈ ಚುನಾವಣೆಗೆ ತಡೆಯಾಜ್ಞೆ ತರುತ್ತೇವೆ.’ ಎಂದು ಹೇಳಿದರು.

ಘಟನೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪತ್ರಿಕೆಯು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.