ADVERTISEMENT

ಸಿಂಥೆಟಿಕ್ ಟರ್ಫ್ ಸ್ಥಳಾಂತರಗೊಂಡರೆ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:45 IST
Last Updated 17 ಆಗಸ್ಟ್ 2012, 9:45 IST

ಸೋಮವಾರಪೇಟೆ: ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸಿಂಥೆಟಿಕ್ ಟರ್ಫ್ ಮೈದಾನವನ್ನು ನಗರದಿಂದ ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನಗಳು ನಡೆದಲ್ಲಿ ಉಗ್ರ ಹೋರಾಟ ರೂಪಿಸಲಾಗುವದು ಎಂದು ವಿವಿಧ ಸಂಘಟನೆಗಳು ಎಚ್ಚರಿಸಿವೆ.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಬಸವೇಶ್ವರ ಯುವಕ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು. ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಡಿ.ಎಸ್.ಗಿರೀಶ್ ಮಾತನಾಡಿ, ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿಂಥೆಟಿಕ್ ಟರ್ಫ್ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿದ್ದು ಇದನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವದು ಖಂಡನೀಯ.

ಈ ಮೈದಾನದಲ್ಲಿ ಆಟವಾಡಿದ ಅದೆಷ್ಟೋ ಕ್ರೀಡಾಪಟುಗಳು ಇಂದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹ ಸ್ಥಳದಲ್ಲಿ ಟರ್ಫ್ ನಿರ್ಮಾಣವಾದರೆ ನಗರದ ಆಕರ್ಷಣೆಯೂ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಂತೆಯೂ ಆಗುತ್ತದೆ.

ಆದ್ದರಿಂದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಯೇ ಟರ್ಫ್ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ.ಗಿರೀಶ್, ಡಿ.ಎಸ್.ಗುರುಪ್ರಸಾದ್, ಪದಾಧಿಕಾರಿಗಳಾದ ಎ.ಎನ್.ರಾಜೇಶ್, ಕೆ.ಜೆ.ಗುರುಪ್ರಸಾದ್ ಇದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಚಾಲಕ ದಿವಾಕರ್ ಮಾತನಾಡಿ ನಗರದಿಂದ ಟರ್ಫ್ ಮೈದಾನವನ್ನು ಬೇರೆಡೆಗೆ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸರ್ಕಾರಿ ಕಾಲೇಜು ಮೈದಾನದಲ್ಲಿಯೇ ಆಟವಾಡಿದ ಮಂದಿ ಇದೀಗ  ಇಲ್ಲಿನ ಟರ್ಫ್‌ನ್ನು ಬೇರೆಡೆಗೆ ವರ್ಗಾಯಿಸಲು ಮುಂದಾಗಿರುವದು ವಿಪರ್ಯಾಸ ಎಂದರು.

ಈ ಕ್ರೀಡಾಂಗಣದಲ್ಲಿ ಕಳೆದ 3 ವರ್ಷಗಳಿಂದ ನಿರಂತರ ಬೇಸಿಗೆ ಹಾಕಿ ಶಿಬಿರಗಳು ನಡೆಯುತ್ತಿದ್ದು, ಪ್ರತಿವರ್ಷ 100 ಕ್ರೀಡಾಳುಗಳು ತರಬೇತಿ ಪಡೆಯುತ್ತಿದ್ದಾರೆ. ಟರ್ಫ್ ಮೈದಾನವಾದರೆ ಇನ್ನೂ ಉತ್ತೇಜನ ನೀಡಿದಂತಾಗುತ್ತದೆ ಎಂದು ಎಂ.ಎನ್.ಪ್ರಜ್ವಲ್ ಹೇಳಿದರು. ಒಂದು ವೇಳೆ ಬೇರೆಡೆ ಟರ್ಫ್ ಸ್ಥಳಾಂತರಗೊಂಡರೆ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಪರಿಷತ್‌ನ ಪ್ರಮುಖರಾದ ಕಾರ್ತಿಕ್, ರಕ್ಷಿತ್, ಚಂದನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.