ADVERTISEMENT

ಸಿದ್ದಾಪುರ: ಚರಂಡಿಗಳ ಅತಿಕ್ರಮಣ

ಗುರುದರ್ಶನ್
Published 7 ನವೆಂಬರ್ 2013, 8:59 IST
Last Updated 7 ನವೆಂಬರ್ 2013, 8:59 IST

ಸಿದ್ದಾಪುರ: ಸಾಧಾರಣವಾದ ಮಳೆಯೊಂದು ಹುಯ್ದರೆ ಸಾಕು ಸಂಪೂರ್ಣ ನೀರು ಪಟ್ಟಣದ ನಡುವೆ ಹರಿಯತೊಡಗುತ್ತದೆ. ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥಗೊಳ್ಳುತ್ತದೆ. ಇದು ಪಟ್ಟಣದಾದ್ಯಂತ ತ್ಯಾಜ್ಯಗಳ ರಾಶಿ ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಹರಡಲು ತಳಪಾಯ ಹಾಕುತ್ತದೆ.

ಕರಡಿಗೋಡಿಗೆ ಹೋಗುವ ರಸ್ತೆ ಸೇರಿದಂತೆ ಮಡಿಕೇರಿ, ವಿರಾಜಪೇಟೆ, ಪಾಲಿಬೆಟ್ಟ ರಸ್ತೆಗಳು ಹದಗೆಟ್ಟಿವೆ. ಇಷ್ಟಕ್ಕೆಲ್ಲ ಮೂಲ ಕಾರಣ ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹದಗೆಟ್ಟಿ­ರುವ ಚರಂಡಿ ವ್ಯವಸ್ಥೆ.

ಅನೇಕ ವರ್ಷಗಳಿಂದ ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಎಂಬುದು ಪರಿಹಾರ ಕಾಣದ ಗಹನ ಪ್ರಶ್ನೆಯಾಗಿ ಕಾಡುತ್ತಿದೆ.

ಚರಂಡಿಯಲ್ಲಿ ಹರಿಯ­ಬೇಕಾದದ್ದೆಲ್ಲಾ ರಸ್ತೆಯ ಮೇಲೆ ಹರಿಯುತ್ತಿದೆ. ಸಾಧಾರಣ ಮಳೆಗೆ ಪಟ್ಟಣದ ತುಂಬ ನೀರು ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಚರಂಡಿಯಲ್ಲಿ ಹರಿಯಬೇಕಾದ ತ್ಯಾಜ್ಯಗಳು, ಕೊಳಚೆ ನೀರು ರಸ್ತೆಯ ಇಕ್ಕೆಲಗಳಲ್ಲಿ ಹರಿದು ಗಬ್ಬೆಬ್ಬಿಸುತ್ತದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಗಳ ಮೇಲೆ ನೀರು ಹರಿಯು­ವುದರಿಂದ ನೀರು ಸಂಗ್ರಹಗೊಂಡು ರಸ್ತೆಗಳು ಸಂಚಾರಕ್ಕೆ ಅಯೋಗ್ಯ­ವಾಗಿವೆ.

ಹೀಗೊಂದು ಸಮಸ್ಯೆಗೆ ಪ್ರಮುಖ ಕಾರಣ ಇಲ್ಲಿನ ಕೆಲ ವ್ಯಾಪಾರಸ್ಥರು. ಪಟ್ಟಣದ ನಡುವಿನ ಚರಂಡಿಗಳ ಮೇಲೆ ಕೆಲ ವ್ಯಾಪಾರಿಗಳು ಅನಧಿಕೃತವಾಗಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಹೀಗೆ ಚರಂಡಿಗಳ ಮೇಲೆ ಅಂಗಡಿಗಳನ್ನು ನಿರ್ಮಿಸಿರುವ ಕಾರಣ ಚರಂಡಿ ವ್ಯವಸ್ಥೆ ಮುಚ್ಚಿಹೋಗಿದೆ.

ಮೈಸೂರು ರಸ್ತೆಯ ಚರಂಡಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಚರಂಡಿಗಳ ಮೇಲೆ ಬಸ್‌ ನಿಲ್ದಾಣ­ದಲ್ಲಿಯೇ ಎರಡು ಅನಧಿಕೃತ ಅಂಗಡಿ ಇವೆ.

ಇದರಿಂದ ಚರಂಡಿ ಮೂಲಕ ಹರಿಯಬೇಕಾದ ಕೊಳಚೆ, ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿದೆ. ಇಲ್ಲಿನ ಎಂ.ಜಿ ರಸ್ತೆ ಹಾಗೂ ಮಾರ್ಕೆಟ್‌ ರಸ್ತೆಯಲ್ಲಿಯೂ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಇಲ್ಲಿನ ಕೊಳಚೆಗಳು ಕೂಡ ಪಟ್ಟಣದತ್ತ ಹರಿದು ಬರುವು­ದರಿಂದ ಪಾದಾಚಾರಿಗಳು ನೆಗೆ­ಯುತ್ತಾ, ಹಾರುತ್ತಾ ನಡೆಯ­ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿರುವ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿ ವ್ಯವಸ್ಥೆ ಸರಿಪಡಿಸಿಕೊಡಬೇಕಾಗಿ ಇಲ್ಲಿನ ಗ್ರಾಮಸ್ಥರ ಬಹು ದಿನಗಳ ಬೇಡಿಕೆ­ಯಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಲು ಅನೇಕ ಬಾರಿ ಮುಂದಾದಾ­ಗಲೂ ಕೆಲವರ ಸಹಕಾರ ಕೊರತೆ­ಯಿಂದ ಪರಿಸ್ಥಿತಿ ಕ್ಲಿಷ್ಟಕರವಾಗಿ ಉಳಿದಿದೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.