ಸಿದ್ದಾಪುರ(ದೊರೈಸ್ವಾಮಿ ಪಿಳ್ಳೈ ವೇದಿಕೆ): ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಂಬರ ಶೈಲಿಗೆ ಪೋಷಕರು ಮಾರು ಹೋಗಿರುವುದು ವಿಷಾದಕರ ಬೆಳವಣಿಗೆಯಾಗಿದ್ದು, ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೆಚ್ಚು ಆಸಕ್ತರಾದರೆ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಜೇಯರಾಗಲು ಸಾಧ್ಯ ಎಂದು ಅಂತರರಾಷ್ಟ್ರೀಯ ಮ್ಯಾರಥಾನ್ ಓಟಗಾರ ಮೇಜರ್ ಹೊಸೋಕ್ಲು ಚಿಣ್ಣಪ್ಪ ಹೇಳಿದರು.
ಸಿದ್ದಾಪುರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಹಾಗೂ ಸಾಧಕರ ಸನ್ಮಾನ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿರಾಜಪೇಟೆ ತಾ.ಪಂ.ಸದಸ್ಯ ಪಿ.ವಿ.ಜಾನ್ಸನ್ ಮಾತನಾಡಿ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಅಂಜಿಕೆ ಇಲ್ಲದೇ ಭಾಗವಹಿಸಿದರೆ ಮಾತ್ರ ತಮ್ಮ ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಾಧ್ಯ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರು ತೋರುವ ಕಳಕಳಿಯೇ ಮಕ್ಕಳ ಪಠ್ಯದಲ್ಲಿ ಪ್ರತಿಬಿಂಬಿಸಲಿದ್ದು, ಮಕ್ಕಳ ಪಠ್ಯ ಚಟುವಟಿಕೆಗಳ ಕುರಿತು ಪೋಷಕರು ಆಸಕ್ತರಾಗಬೇಕು ಎಂದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ವನಜ ಧ್ವಜಾರೋಹಣ ನೆರವೇರಿಸಿ ಶತಮಾನೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ವಿಸೆವನ್ ಯುವಕ ಸಂಘದ ಸಹಕಾರದಲ್ಲಿ ಮೇಜರ್ ಹೊಸೋಕ್ಲು ಚಿಣ್ಣಪ್ಪ ಅವರ ನೇತೃತ್ವದಲ್ಲಿ ಕಾವೇರಿ ನದಿಯಿಂದ ಕ್ರೀಡಾಜ್ಯೋತಿಯನ್ನು ತೋಟಂಬೈಲು ಮಾದಪ್ಪ ಮಹಾದ್ವಾರದ ಮುಖಾಂತರ ಜಿ.ಎಂ.ಪಿ. ಶಾಲಾ ಮೈದಾನಕ್ಕೆ ತರಲಾಯಿತು.
ನೂತನವಾಗಿ ನಿರ್ಮಿಸಲಾದ ಶಾಲಾ ಮುಖ್ಯಶಿಕ್ಷಕರ ಕೊಠಡಿಯನ್ನು ಸಿದ್ದಾಪುರ ಮುಸ್ಲಿಂ ಜಮಾಯತ್‌ನ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ ಉದ್ಘಾಟಿಸಿದರು. ಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ವೈ.ಎಂ.ಕಾವೇರಿ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ.ಸದಸ್ಯ ಎಂ.ಎಸ್.ವೆಂಕಟೇಶ್, ಗ್ರಾ.ಪಂ. ಉಪಾಧ್ಯಕ್ಷ ಎಂ.ಎಚ್.ಮೂಸ ಬ್ಯಾರಿ, ಕಾಫಿ ಬೆಳೆಗಾರ ಜಿ.ಎಸ್.ನರೇಂದ್ರ, ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ಶ್ಯಾಂ ಐಯಣ್ಣ, ಸ್ವಾಗತ ಸಮಿತಿಯ ಅಧ್ಯಕ್ಷ ಪಿ.ಎ.ಐಯ್ಯಣ್ಣ ಉಪಸ್ಥಿತರಿದ್ದರು.
ಶಿಕ್ಷಕಿ ರಾಧಮ್ಮ ವರದಿ ವಾಚಿಸಿದರು. ಶಾಲಾ ಮುಖ್ಯಶಿಕ್ಷಕ ಮರಿಯಯ್ಯ ಸ್ವಾಗತಿಸಿದರು. ಸಹ ಶಿಕ್ಷಕಿ ಎಂ.ಕೆ.ಶಾರದಮ್ಮ ಪ್ರಾಸ್ತಾವಿಕ ಭಾಷಣ ಮಾಡಿದರು. ಸಹಶಿಕ್ಷಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ತೀರ್ಪುಗಾರರಾಗಿ ಅಧ್ಯಾಪಕರಾದ ಜಿಮ್ಮಿ ಸಿಕ್ವೇರ, ಮಂಜುನಾಥ್ ಹಾಗೂ ಜೋಸಫ್ ಸಾಂ ಕಾರ್ಯ ನಿರ್ವಹಿಸಿದರು.
ಶಾಲೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಎಂ.ಮೋಹನಾಂಗಿ, ಸಿ.ಎಂ.ಬೀಮಯ್ಯ, ಎಂ.ಕೆ.ಸಾವಿತ್ರಿ, ಎಂ.ಕೆ.ಶಾರದಮ್ಮ, ಪಿ.ಎ.ಐಯಣ್ಣ, ಹೊಸೋಕ್ಲು ಚಿಣ್ಣಪ್ಪ ಹಾಗೂ ಎಚ್.ಜಿ.ಪವಿತ್ರ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ.ಅಧ್ಯಕ್ಷ ಎಂ.ಎಸ್.ವೆಂಕಟೇಶ್,ಆಹಾರ ಸಮಿತಿಯ ಆಧ್ಯಕ್ಷ ಎಂ.ಬಿಜೋಯ್ ಸ್ವಾಗತ ಸಮಿತಿಯ ಕಾರ್ಯದರ್ಶಿ ಟಿ.ಎಚ್.ಮಂಜುನಾಥ್, ವೇದಿಕೆ ಸಮಿತಿಯ ಅಧ್ಯಕ್ಷ ಎಂ.ಎಚ್.ಮೂಸ ಕ್ರೀಡಾಕೂಟದ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಕವಾಯತು, ಪಿರಮಿಡ್, ಕಂಸಾಳೆ ನೃತ್ಯ ಹಾಗೂ ಜನಪದ ನೃತ್ಯ ಜನರನ್ನು ಆಕರ್ಷಿಸಿತು. ಶಾಂತಳ್ಳಿ ಗಣೇಶ್ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.