ADVERTISEMENT

ಸುಪ್ರೀತಾ ಕುಟುಂಬಕ್ಕೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 10:10 IST
Last Updated 20 ಮಾರ್ಚ್ 2011, 10:10 IST

ಶನಿವಾರಸಂತೆ: ಮಾ.16ರಂದು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ವಿದ್ಯಾರ್ಥಿನಿ ಸುಪ್ರೀತಾಳ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರವಾಗಿ 2 ಲಕ್ಷ ರೂಪಾಯಿ ಮೌಲ್ಯದ ಚೆಕ್ ಅನ್ನು ಶನಿವಾರ  ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮೃತಳ ಮನೆಗೆ ತೆರಳಿ ಆಕೆಯ ತಂದೆ-ತಾಯಿಗೆ ಒಪ್ಪಿಸಿದರು.

ಕೊಡ್ಲಿಪೇಟೆ ಹೋಬಳಿ ನೀರುಗುಂದ ಗ್ರಾಮದ ಕೃಷಿಕ ಇಂದೂಶೇಖರ್-ತೀರ್ಥಾ ದಂಪತಿಯ ಮಗಳು ಸುಪ್ರೀತಾ ಕಿರಿಕೊಡ್ಲಿ ಮಠದ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಮಾ. 16ರಂದು ಬೆಳಿಗ್ಗೆ ಸಹಪಾಠಿ ಸುಸ್ಮಿತಾ (ರಾಗಿಣಿ) ಜೊತೆಯಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆ ಎದುರಾಗಿ ಸುಪ್ರೀತಾಳನ್ನು ಬೆನ್ನಟ್ಟಿ ಸೊಂಡಿಲಿನಿಂದ ಬಳಸಿ ಬೀಸಿ ಎಸೆದು ಬಲಿ ತೆಗೆದುಕೊಂಡಿತ್ತು.

ಪರಿಹಾರದ ಚೆಕ್ ಅನ್ನು ಸ್ವೀಕರಿಸಿದ ಇಂದೂಶೇಖರ್ ಮಾತನಾಡಿ, ಕಾಡಿನ ಮರಗಳನ್ನು ಪ್ರತಿನಿತ್ಯ ಕಡಿದು ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿರುವುದರಿಂದಲೆ ಕಾಡು-ನಾಡು ಒಂದೇ ಆಗಿದೆ. ಕಾಡಾನೆಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಸಂಚರಿಸುತ್ತಿವೆ. ಅರಣ್ಯ ಇಲಾಖೆ ತಟಸ್ಥವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಶಾಸಕರನ್ನು ಆಗ್ರಹಿಸಿದರು.

ಅರಣ್ಯ ವಲಯಾಧಿಕಾರಿ ಜಯಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮಾತನಾಡಿ, ಗ್ರಾಮಸ್ಥರು ಸುಳ್ಳು ಹೇಳುವುದಿಲ್ಲ. ಅರಣ್ಯದ ಮರಗಳನ್ನು ಕಡಿಯಲು ಬಿಡಬೇಡಿ. ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯರನ್ನೇ ನೇಮಿಸಿಕೊಂಡು ಕಾಡಾನೆಗಳನ್ನು ಓಡಿಸುವ ಕ್ರಮ ಕೈಗೊಳ್ಳಿ ಎಂದರು.ಕಾಡಾನೆ ದಾಳಿ ಮಾಡಿದ ರಸ್ತೆ ಇಕ್ಕಟ್ಟಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಗಿಡಕಂಟಿಗಳು ಬೆಳೆದು ನಿಂತಿವೆ ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ಒಂದು ವಾರದೊಳಗೆ ರಸ್ತೆಯನ್ನು ಸರಿಪಡಿಸುವ ಭರವಸೆ ನೀಡಿದರು.

ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ಬಿ.ಧರ್ಮಪ್ಪ, ಚಂದ್ರಿಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯ, ಪ್ರಮುಖರಾದ ಬಾಬುರಾಜೇಂದ್ರಪ್ರಸಾದ್, ಭಗವಾನ್, ಪ್ರಸಾದ್, ಕೆ.ವಿ.ಮಂಜುನಾಥ್, ಯತೀಶ್‌ಕುಮಾರ್, ಎಚ್.ಬಿ.ಕುಶಾಲಪ್ಪ, ನಾಗರಾಜ್, ಯೋಗೇಶ್, ಕುಮಾರ್, ಪರಶುರಾಮ್, ಬಸವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್, ಆರ್.ಎಫ್.ಓ.ಜಯಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.