ADVERTISEMENT

ಸ್ಪೀಕರ್‌ಗೆ ಪ್ರತ್ಯೇಕ ಕಾನೂನು ಇದೆಯೇ?

ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್ ಜಿಲ್ಲಾ ವಕ್ತಾರ ಮರು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:24 IST
Last Updated 6 ಏಪ್ರಿಲ್ 2013, 6:24 IST

ಮಡಿಕೇರಿ: ಚುನಾವಣಾ ನೀತಿ ಸಂಹಿತೆ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೂ ಅನ್ವಯವಾಗುತ್ತದೆ. ಅವರು ಬಿ ಫಾರಂ ತುಂಬಲಿ, ಬಿಡಲಿ ಅದು ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಆದರೆ, ದೇವಸ್ಥಾನದಲ್ಲಿ ಬಿಜೆಪಿ ಸಭೆ ನಡೆಸಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿ.ಎಸ್. ತಮ್ಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಂಗಲ ಬಳಿಯ ಈಶ್ವರ ದೇವಸ್ಥಾನದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅವರು ಒತ್ತಾಯಿಸಿದರು.

ಈಗ ಚುನಾವಣಾ ಘೋಷಣೆ ಆಗಿರುವುದರಿಂದ ಹಾಗೂ ಆ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸ್ಪೀಕರ್ ಅವರು ಕೂಡ ಈ ವ್ಯಾಪ್ತಿಗೊಳಗೆ ಬರುತ್ತಾರೆ. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅವರು ಅಧ್ಯಕ್ಷರಾಗಿ ಕಲಾಪ ನಡೆಸಿರಬಹುದು, ಹಾಗಂತ ಅವರಿಗೊಂದು ಕಾನೂನು, ಇನ್ನೊಬ್ಬರಿಗೊಂದು ಕಾನೂನು ಇದೆಯೇ? ಎಂದು ಅವರು ಪ್ರಶ್ನಿಸಿದರು.

ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಚುನಾವಣಾ ಸಭೆ ನಡೆಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನು ಉಲ್ಲಂಘಿಸಿರುವ ಬೋಪಯ್ಯ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾನೂನು ಬಾಹಿರ ನೇಮಕ:
`ದೇವಸ್ಥಾನದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದರೆ ತಪ್ಪೇನು?' ಬೋಪಯ್ಯ ಅವರನ್ನು ಮೆಚ್ಚಿಸುವ ಉದ್ದೇಶದಿಂದ ವಾದಮಾಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮನು ಮುತ್ತಪ್ಪ ಅವರನ್ನು ಭಗಂಡೇಶ್ವರ ತಲಕಾವೇರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕೂಡ ಕಾನೂನು ಬಾಹಿರ ಎಂದು ಬಿ.ಎಸ್. ತಮ್ಮಯ್ಯ ಆರೋಪಿಸಿದರು.

ರಾಜಕೀಯ ಪಕ್ಷಗಳ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೇಮಿಸಬಾರದು ಎಂದು ಮುಜರಾಯಿ ಇಲಾಖೆಯ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಾನೂನನ್ನು ಬಿಜೆಪಿ ಸರ್ಕಾರವೇ ಜಾರಿಗೆ ತಂದಿದೆ. ಆದರೆ, ದುರದೃಷ್ಟಕರವೆಂದರೆ ಈ ಕಾನೂನನ್ನು ಬಿಜೆಪಿ ಮುಖಂಡರೇ ಉಲ್ಲಂಘಿಸುತ್ತಿದ್ದಾರೆ. ಜಿಲ್ಲಾ ಬಿಜೆಪಿ ವಕ್ತಾರರಾಗಿರುವ ಮನು ಮುತ್ತಪ್ಪ ಅವರನ್ನು ಭಗಂಡೇಶ್ವರ- ತಲಕಾವೇರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅವರು ಆರೋಪಿಸಿದರು.

ಇದಕ್ಕೂ ಮುಂಚೆ ಮನು ಮುತ್ತಪ್ಪ ಅವರು ರೌಡಿ ಶೀಟ್‌ನಲ್ಲಿದ್ದರು. ಸರ್ಕಾರದ ಮೇಲೆ ಪ್ರಭಾವ ಬೀರಿದ ಸ್ಥಳೀಯ ಬಿಜೆಪಿ ನಾಯಕರು, ಮನು ಮುತ್ತಪ್ಪ ಅವರನ್ನು ತಾತ್ಕಾಲಿಕವಾಗಿ ಈ ಪಟ್ಟಿಯಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.

ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಗಲಭೆ ನಡೆಸಿದ್ದರು ಎಂದು ಮನು ಮುತ್ತಪ್ಪ ಅವರ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ. ಇಂತಹ ವ್ಯಕ್ತಿಯನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಬಂಧನದಲ್ಲಿಡಬೇಕು. ಇಲ್ಲದಿದ್ದರೆ ಚುನಾವಣಾ ಪ್ರಕ್ರಿಯೆಗೆ ಭಂಗ ತರುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಅಡ್ಡಂಡ ಕಾರ್ಯಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೇರವಾಗಿ ರಾಜಕೀಯಕ್ಕೆ ಇಳಿಯಲಿ ಎಂದು ಅವರು ಸವಾಲು ಹಾಕಿದರು.

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ಸಿನ ಟಿ.ಪಿ.ರಮೇಶ್ ಹಾಗೂ ಜೆಡಿಎಸ್ ಪಕ್ಷದ ಮುನೀರ್ ಅಹ್ಮದ್ ಅವರು ಕಸಾಪ ನಿಯಮಾವಳಿಯಂತೆ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರನ್ನು ಪ್ರಶ್ನಿಸುತ್ತಿರುವ ಮನು ಮುತ್ತಪ್ಪ ತಾಕತ್ತಿದ್ದರೆ ಅವರಿಗೆ ಕಸಾಪ ಚುನಾವಣೆಯಲ್ಲಿ ಪೈಪೋಟಿ ನೀಡಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರಾದ ವಿ.ಪಿ. ಸುರೇಶ್, ಕೊಲ್ಯದ ಗಿರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.