ಸೋಮವಾರಪೇಟೆ: ಜಗತ್ತಿನಲ್ಲಿ ದ್ವೇಷ ಬೆಳೆಯಲು ಸ್ವಾರ್ಥ ಮನೋಭಾವ ಕಾರಣ. ಭ್ರಾತೃತ್ವ ಬೆಳೆಯಲು ಆತ್ಮ ಜಾಗೃತಿಗೊಳ್ಳಬೇಕು ಎಂದು ಮಡಿಕೇರಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಹಿರಿಯ ಶಿಕ್ಷಕಿ ಧನಲಕ್ಷ್ಮಿ ಹೇಳಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಸೋಮವಾರ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿಗೆ ಶಾಂತಿ ಕೊಡಲು ಪರಮಾತ್ಮನಿಂದ ಮಾತ್ರ ಸಾಧ್ಯ. ಎಲ್ಲರೂ ಆತನನ್ನು ಜ್ಯೋತಿ ಸ್ವರೂಪದಲ್ಲಿ ಕಾಣಬೇಕು. ಶರೀರದ ಒಳಗಿನ ಆತ್ಮದ ಜ್ಯೋತಿಗೆ ಜಾತಿ, ಧರ್ಮದ ಬಂಧನವಿಲ್ಲ. ಆದರೆ ಮಾನವ ಅಲ್ಪ ಜ್ಞಾನಿಯಾಗಿದ್ದು, ಅಲೌಕಿಕ ಜೀವನದಲ್ಲಿ ಸ್ನೇಹ, ಪ್ರೀತಿ ಮರೆಯಾಗಿ ಅಸೂಯೆ ಅಧಿಕವಾಗುತ್ತಿದೆ ಎಂದು ವಿಷಾದಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಮಾನವನ ಜೀವನ ಸಾಕ್ಷಾತ್ಕಾರಕ್ಕೆ ಆತ್ಮ ಶುದ್ಧೀಕರಣವಿರಬೇಕು. ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಉತ್ತಮ ನಡವಳಿಕೆ ಮೂಲಕ ಮಾನವೀಯತೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಳಿನಿ ಗಣೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎ. ರಾಜಶೇಖರ್, ಈಶ್ವರೀಯ ವಿಶ್ವವಿದ್ಯಾನಿಲಯದ ಶಾಲಿನಿ ಹಾಜರಿದ್ದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.