ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿಯ ಹಂಪಾಪುರ ಗ್ರಾಮದಲ್ಲಿ ಹಗಲು-ರಾತ್ರಿ ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಗ್ರಾಮಸ್ಥರ ಮೇಲೆ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ಗ್ರಾಮಸ್ಥರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಗ್ರಾಮದ ಹೇಮಾವತಿ ನದಿ ದಂಡೆಯ ಮರಳು ತೆಗೆಯಲು ಸೋಮವಾರಪೇಟೆ ಲಿಂಗರಾಜು ಎಂಬವರಿಗೆ ಗುತ್ತಿಗೆ ಆಧಾರದ ಮೇಲೆ ಪರವಾನಗಿ ನೀಡಲಾಗಿದೆ. ಆದರೆ, ಆ ಸ್ಥಳದಲ್ಲಿ ಲಿಂಗರಾಜು ಇರುವುದೇ ಇಲ್ಲ. ಕೆಲಕೊಡ್ಲಿ ಗ್ರಾಮದ ಮಂಜುನಾಥ, ಭರತ್, ಹಂಪಾಪುರ ಗ್ರಾಮದ ಮಲ್ಲಪ್ಪ, ಹೂವಣ್ಣ, ರಾಜಪ್ಪ ಎಂಬವರು ಹಿಟಾಚಿ, ಬೋಟ್, ಜೆ.ಸಿ.ಬಿ.ಯಂತ್ರ ಬಳಸಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ.
ಇದರಿಂದ ಕುಡಿಯುವ ನೀರು ಕಲುಷಿತಗೊಂಡು ಜನರಿಗೆ ಹಾಗೂ ದನಕರುಗಳಿಗೆ ತೊಂದರೆಯಾಗಿದೆ. ಲಾರಿ, ಹಿಟಾಚಿ ಶಬ್ಧದಿಂದ ಕಾಡಿನಲ್ಲಿರುವ ಆನೆಗಳು ಗ್ರಾಮಕ್ಕೆ ನುಗ್ಗಿ ಜನರ ಮೇಲೆ ದಾಂಧಲೆ ನಡೆಸುತ್ತಿವೆ. ಈ ವ್ಯಾಪ್ತಿಯಲ್ಲೆ ಈಗಾಗಲೇ ಕಾಡಾನೆಗಳು ಇಬ್ಬರನ್ನು ಬಲಿ ತೆಗೆದುಕೊಂಡಿವೆ. ಗ್ರಾಮಸ್ಥರು ಜೀವ ಭಯದಿಂದ ವಿಚಾರಿಸಲು ತೆರಳಿದರೆ ಅಕ್ರಮ ಮರಳು ದಂಧೆ ನಡೆಸುತ್ತಿರುವ 5 ಮಂದಿ ದೌರ್ಜನ್ಯವೆಸಗಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ರಾತ್ರಿ 8 ಗಂಟೆ ಸಮಯದಲ್ಲಿ 5 ಜನರ ಗುಂಪು ಗ್ರಾಮದ ಹನುಮಪ್ಪ ಮತ್ತು ಅವರ ಮಗ ಕುಮಾರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದೆ. ವಿಚಾರಿಸಲು ತೆರಳಿದ ಗ್ರಾಮಸ್ಥರಿಗೂ ಹಾಗೂ ಮರಳು ತೆಗೆಯುತ್ತಿದ್ದವರಿಗೂ ಗಲಾಟೆಯಾಗಿ ಪರಸ್ಪರ ಹಲ್ಲೆ ನಡೆದು ಗ್ರಾಮಸ್ಥರನ್ನೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರಾದ ಹನುಮಪ್ಪ, ಎಚ್.ಎಚ್.ಕುಮಾರ್, ಈರಪ್ಪ, ಉಮೇಶ್, ರಂಗಪ್ಪ, ಸುರೇಶ, ಎಚ್.ಪಿ.ನಾಗೇಶ್, ಪರಮೇಶ್, ರಾಜಪ್ಪ, ಎಚ್.ಈ.ವೆಂಕಪ್ಪ, ಎಚ್.ಆರ್.ರಂಗಪ್ಪ ಮತ್ತಿರರು ದೂರಿನಲ್ಲಿ ತಿಳಿಸಿದ್ದಾರೆ.
ಪರಸ್ಪರ ಹಲ್ಲೆ ನಡೆಸಿದ ಹನುಮಪ್ಪ, ಸ್ವಾಮಿ, ಸೋಮಶೇಖರ್, ನಿರ್ವಾಣಿ, ಕುಮಾರ, ಪುಟ್ಟೇಗೌಡ, ರಘು, ರಾಜಪ್ಪ, ಶೇಖರ್, ಈರಪ್ಪ, ರಂಗಪ್ಪ, ಸುಂದರ್, ಸತೀಶ್, ಹರೀಶ್, ರಾಜ, ಭರತ್ ಅವರುಗಳ ಮೇಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.