ADVERTISEMENT

ಹೂ ಬಿಟ್ಟು ಕಂಗೊಳಿಸುತ್ತಿದೆ ಕಾಫಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:10 IST
Last Updated 21 ಫೆಬ್ರುವರಿ 2011, 8:10 IST

ಗೋಣಿಕೊಪ್ಪಲು: ಕೊಡಗಿಗೆ ಈಗ ನಿಜವಾದ ವಸಂತ ಕಾಲ.ಇಲ್ಲಿನ ಹಸಿರು ಮುಕ್ಕುವ ಗಿಡ ಮರಗಳು ಚಿಗುರೊಡೆದು ಕಂಗೊಳಿಸುತ್ತಿವೆ. ಮತ್ತೊಂದು ಕಡೆ ಮುಗಿಲೆತ್ತರ ಬೆಳೆದಿರುವ ಮರಗಳ ನಡುವೆ ಸೊಂಪಾಗಿ ತಲೆದೂಗುವ ಕಾಫಿ ಗಿಡ ಕೂಡ ಹೂಬಿಟ್ಟು ಚೆಲುವೆಲ್ಲಾ ನಂದೆಂದಿದೆ.ಕೊಡಗಿನ ಯಾವುದೇ ಭಾಗದಲ್ಲಿ ಸಂಚರಿಸಿದರೂ ಈಗ ಕಾಫಿ ಹೂವಿನದೇ ಸುವಾಸನೆ. ಗಿಡದ ರೆಕ್ಕೆಗಳಲ್ಲಿ ಮಾಲೆ ಪೋಣಿಸಿದಂತೆ ಹೂಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿದೆ. ಹಚ್ಚ-ಹಸಿರಿನ ನಡುವೆ ಕಡು ಬಿಳುಪಿನ ಹೂ ಹಸಿರು ಸಾಗರಕ್ಕೆ ಬೆಳ್ಳಿ ತೋರಣ ಕಟ್ಟಿದಂತಿದೆ.

ಹೂವಿನ ಪರಿಮಳ ಅರಸಿ ಬರುವ ಜೇನ್ನೊಣ ಮತ್ತು ದುಂಬಿಗಳು ತೋಟದಲ್ಲಿ ಝೇಂಕರಿಸುತ್ತಿವೆ. ಮೂಗಿಗೆ ಸುವಾಸನೆ, ಕಣ್ಣುಗಳಿಗೆ ಆನಂದ ಉಂಟು ಮಾಡುವ ಈ ಹೂವನ್ನು ನೋಡುವುದೇ ಆನಂದ. ಹೂ ಅರಳಿದ ಮೇಲೆ ಮೂರು ದಿನಗಳ ಕಾಲ ಇಡೀ ಪರಿಸರಕ್ಕೆ ಚೆಲುವಿನ ನಗೆ ಚೆಲ್ಲುತ್ತದೆ. ಬಳಿಕ ಹೂವಿನ ಎಸಳು ನೆಲತಬ್ಬಿ ಮಾಯವಾಗುತ್ತದೆ. ಈ ಸಂದರ್ಭವನ್ನು ಕಾದು ಕುಳಿತ ಜೇನ್ನೊಣ ತೋಟದಲ್ಲಿ ಸ್ವಚ್ಛಂದವಾಗಿ ಹಾರಾಡಿ ಪರಾಗ ಸ್ಪರ್ಶ ಉಂಟು ಮಾಡುವುದರ ಜತೆಗೆ ಆನಂದದಿಂದ ಮಕರಂದ ಹೀರುತ್ತವೆ. ಈ ವೇಳೆ ಕೊಡಗಿನ ಜೇನಿಗೆ ಸುಗ್ಗಿಯ ಕಾಲ.

ಕಾಫಿ ಕೊಯ್ದ ಬೆಳೆಗಾರರು ಗಿಡಕ್ಕೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ. ನೀರುಂಡ ಗಿಡ ತಡ ಮಾಡದೆ ಕೇವಲ ಒಂದು ವಾರದಲ್ಲಿ ತನ್ನ ರೆಕ್ಕೆಗಳಲ್ಲಿ ಮೊಗ್ಗರಳಿಸಿ ಹೂ ಬಿಡುತ್ತದೆ. ಫೆಬ್ರುವರಿ ಮತ್ತು ಮಾರ್ಚ್ ಕೊಡಗಿಗೆ ನಿಜವಾದ ಋತುಗಳ ರಾಜ ವಸಂತ ಹೆಜ್ಜೆ ಇಡುತ್ತಾನೆ.ದಕ್ಷಿಣ ಕೊಡಗಿನಾದ್ಯಂತ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಕಾಫಿ ತೋಟವನ್ನು ನೋಡುವುದೇ ಆನಂದ. ಪ್ರಕೃತಿಪ್ರಿಯ ಪ್ರವಾಸಿಗರು ಈ ಸಂದರ್ಭದಲ್ಲಿ ತೋಟದ ಸೌಂದರ್ಯವನ್ನು ವೀಕ್ಷಿಸುವುದಕ್ಕಾಗಿಯೇ ಕೊಡಗಿಗೆ ಆಗಮಿಸುತ್ತಾರೆ. ಕಾಫಿ ಕೊಯ್ಯುವಾಗ ತನ್ನೆಲ್ಲಾ ಶ್ರಮವನ್ನು ಹಾಕಿ ಸುಸ್ತಾಗಿದ್ದ ಬೆಳೆಗಾರರು ಕೂಡ ತೋಟದ ತುಂಬ ಕಾಫಿ ಹೂ ಅರಳಿರುವುದನ್ನು ನೋಡಿ ಸಂತೃಪ್ತಿಯ ನಗೆ ಚೆಲ್ಲುತ್ತಾರೆ. ಮಲ್ಲಿಗೆ ದಂಡೆಯಂತಿರುವ ಹೂವಿಗೆ ಸೋಲದ ಮನಸೇ ಇಲ್ಲ.

ಉತ್ತಮ ಹೂ ಬಿಟ್ಟರೆ ಮುಂದಿನ ವರ್ಷ ಉತ್ತಮ ಫಸಲು ಲಭಿಸುತ್ತದೆ ಎಂಬ ಸಂತಸ ಅವರದು. ಹೂ ಬಿಟ್ಟ ಕೂಡಲೇ ಕಾಫಿ ಕಟ್ಟುವುದಿಲ್ಲ. ಕಾಯಿ ಕಟ್ಟಬೇಕಾದರೆ ಹೂ ಬಿಟ್ಟ ಅವಧಿಯಲ್ಲಿ ಹದವಾದ ಹವಾಗುಣ ಮುಖ್ಯ. ಹೂ ಬಿಟ್ಟ ಮೂರು ದಿನದ ಒಳಗೆ ಮಳೆ ಬಿದ್ದರೆ ನಷ್ಟ. ಈ ಬಾರಿ ನೀರಿಗೆ ಸಮಸ್ಯೆ ಎದುರಾಗದ ಕಾರಣ ಸಾಮಾನ್ಯವಾಗಿ ಎಲ್ಲರೂ ಕಾಫಿ ಗಿಡಕ್ಕೆ ನೀರುಣಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.