ADVERTISEMENT

‘ಅಕ್ಷರ ಜಾತ್ರೆ ಯಶಸ್ಸಿಗೆ ಜನತೆಗೆ ಕಾರಣ’

80ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಭಿನಂದನಾ ಸಭೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 6:04 IST
Last Updated 3 ಮಾರ್ಚ್ 2014, 6:04 IST

ಮಡಿಕೇರಿ: ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ದುಡಿದ ವಿವಿಧ ಸಮಿತಿಗಳ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವು ನಗರದ ಪೊಲೀಸ್ ಸಮುದಾಯ ಭವನದಲ್ಲಿ ಶನಿವಾರ ನಡೆಯಿತು. ಧನ್ಯವಾದ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಎಚ್. ವಿಶ್ವನಾಥ್, ಬಹುಭಾಷಾ ಸಂಸ್ಕೃತಿಯ ಕೊಡಗು ಜಿಲ್ಲೆಯಲ್ಲಿ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಜಿನ ನಗರಿಯಲ್ಲಿ ಮಂಜಿನಷ್ಟೆ ದೊಡ್ಡ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು ಜಿಲ್ಲೆಯ ಎಲ್ಲ ಜನತೆಗೆ ಸಲ್ಲುತ್ತದೆ. ಸಾಹಿತ್ಯ ಸಮ್ಮೇಳದ ಯಶಸ್ಸಿಗೆ ಸಂಬಂಧಿಸಿದಂತೆ ಹಲವು ಘಟನೆಗಳು ಹಾಗೂ ನೋವುಗಳನ್ನು ದಾಖಲಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 

ವಿಧಾನಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ ಮಾತನಾಡಿ, ಕೊಡಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ರಾಜ್ಯದ ಉದ್ದಗಲಕ್ಕೂ ಹೆಸರು ಮಾಡಿತು. ಜಿಲ್ಲೆಯ ಎಲ್ಲಾ ಜನರ ಸಹಕಾರ, ಸಹಭಾಗಿತ್ವ ಮತ್ತು ಪರಿಶ್ರಮದಿಂದ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಆ ದಿಸೆಯಲ್ಲಿ ಸಮ್ಮೇಳನದ ರೂವಾರಿ ಟಿ.ಪಿ. ರಮೇಶ್ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗೆಯೇ ಮಾಧ್ಯಮಗಳ ಪಾತ್ರವು ದೊಡ್ಡದು ಎಂದು ಹೇಳಿದರು. 

ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಎಚ್.ಸಿ. ಮಹದೇವಪ್ಪ ಅವರು 200 ಕ್ವಿಂಟಲ್ ಅಕ್ಕಿ, ಸಂಸದರಾದ ಎ.ಎಚ್. ವಿಶ್ವನಾಥ್ ಅವರು 35 ಕ್ವಿಂಟಲ್ ಸಕ್ಕರೆ, ವಿಧಾನ ಪರಿಷತ್‌ ಸದಸ್ಯ ಟಿ. ಜಾನ್ ಅವರು 500 ಟಿನ್ ಅಡುಗೆ ಎಣ್ಣೆ, ಮಂಡ್ಯ ಜಿಲ್ಲಾಡಳಿತದಿಂದ ಅಕ್ಕಿ, ಬೆಲ್ಲ, ಪುತ್ತೂರಿನಿಂದ ತೆಂಗಿನ ಕಾಯಿ, ಧರ್ಮಸ್ಥಳದಿಂದ ₨ 2 ಲಕ್ಷ ಹೀಗೆ ಹಲವರ ಸಹಕಾರದಿಂದ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದರು.

ತಡವಾಗಿ ಕಾರ್ಯಕ್ರಮಕ್ಕೆ ಬಂದ ಲೋಕೋಪಯೋಗಿ ಇಲಾಖೆ ಸಚಿವ  ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿದರು. ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಉಪ ವಿಭಾಗಾಧಿಕಾರಿ ಅಭಿರಾಮ್ ಜಿ. ಶಂಕರ, ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ವಿ. ರಾಜು, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಜಿ. ರಾಜೇಂದ್ರ, ಕೈಪಿಡಿ ಸಮಿತಿಯ ಅಧ್ಯಕ್ಷ ಎಚ್‌.ಟಿ. ಅನಿಲ್, ಎಂ.ಸಿ.ಎ ಸಂಸ್ಥೆಯ ನಿರ್ದೇಶಕ ಬಾಬು ಸಿದ್ದುಕುಮಾರ್, ವೇದಿಕೆ ನಿರ್ಮಾಣದ ರಾಜು, ಕೇಶವ ಪ್ರಸಾದ್ ಮುಳಿಯ, ಸಮಾನಂತರ ವೇದಿಕೆ ಸಮಿತಿ ಅಧ್ಯಕ್ಷ ಸಿ. ಜಗನ್ನಾಥ್, ಸ್ವಯಂಸೇವಕರ ಸಮಿತಿ ಅಧ್ಯಕ್ಷ ಶ್ರೀಕುಮಾರ್ ಇದ್ದರು. 
ಗಾಯಕರಾದ ಜಿ.ಚಿದ್ವಿಲಾಸ್, ಲೋಕೇಶ್ ಸಾಗರ್ ಮತ್ತು ಧನಂಜಯ ಮತ್ತಿತರರಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.