ADVERTISEMENT

‘ಕ್ರೀಡೆಯಿಂದ ಮಾನಸಿಕ ಸಮತೋಲನ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 5:35 IST
Last Updated 21 ಸೆಪ್ಟೆಂಬರ್ 2013, 5:35 IST

ಕುಶಾಲನಗರ: ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಕಾಪಾಡುವಲ್ಲಿ ಕ್ರೀಡೆಯು ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಪಠ್ಯದಂತೆ ಕ್ರೀಡೆಯನ್ನೂ ವಿದ್ಯಾರ್ಥಿಗಳು ಸಮನವಾಗಿ ಸ್ವೀಕರಿಸಬಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ ಪ್ರಾಂಶುಪಾಲ ದೊಡ್ಡಮಲ್ಲಪ್ಪ ಕಿವಿಮಾತು ಹೇಳಿದರು.

ಸಮೀಪದ ಕೂಡಿಗೆ ಕ್ರೀಡಾಶಾಲೆ ಮೈದಾನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಗಳ ಆಶ್ರಯದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕೂಟವನ್ನು ಬಲೂನ್ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಪುಸ್ತಕಗಳಿಂದ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಹೀಗಾಗಿ ಪಠ್ಯದೊಂದಿಗೆ ಕ್ರೀಡೆಯೂ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ಮಾತನಾಡಿ ಕ್ರೀಡೆಯಿಂದ ದೈಹಿಕ ಸಾಮರ್ಥ್ಯದೊಂದಿಗೆ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಇದ್ದಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿಗಳೇ ಉತ್ತಮ ಉದಾಹರಣೆ ಎಂದರು. ವೇದಿಕೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ದಯಾನಂದ್, ಕೃಷಿ ಉಪ ನಿರ್ದೇಶಕ ರಾಮಕೃಷ್ಣ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕರುಂಬಯ್ಯ, ಕ್ರೀಡಾಕೂಟದ ಕಾರ್ಯದರ್ಶಿ ವೆಂಕಟೇಶ್ ಇದ್ದರು. ಸುಂಟಿಕೊಪ್ಪ ಶಾಲೆಯ ಶಿಕ್ಷಕ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಸಹಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್‌ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವಾ ಪಲ್ಲೇದ್ ಕಾರ್ಯಕ್ರಮ ನಿರೂಪಿಸಿದರು.

ನಂತರ ದಿನಪೂರ್ತಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಮೂರು ಸಾವಿರ ಮೀಟರ್ ಓಟದ ಸ್ಪರ್ಧೆ, 1,200 ಮೀಟರ್, 800, 500, 200, 100 ಮೀಟರ್ ಓಟದ ಸ್ಪರ್ಧೆಗಳು ನಡೆದವು. ಎತ್ತರ ಜಿಗಿತ ಉದ್ದಜಿಗಿತ, ಗುಂಡು ಎಸೆತ, ತಟ್ಟೆ ಎಸೆತ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.