ADVERTISEMENT

‘ದಸರಾ ಉತ್ಸವಕ್ಕೆ ಕಸದ ರಾಶಿಯ ಸ್ವಾಗತ’

ಪ್ರಜಾವಾಣಿ ವಿಶೇಷ
Published 24 ಸೆಪ್ಟೆಂಬರ್ 2013, 6:40 IST
Last Updated 24 ಸೆಪ್ಟೆಂಬರ್ 2013, 6:40 IST

ಗೋಣಿಕೊಪ್ಪಲು: ಜನಮನ ರಂಜಿಸುವ ದಕ್ಷಿಣ ಕೊಡಗಿನ ಸಾಂಸ್ಕೃತಿಕ ಉತ್ಸವ ದಸರಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಗೊಂಡಿದೆ.
ಕಳೆದ 35 ವರ್ಷಗಳಿಂದ ನಡೆಯುತ್ತಿರುವ ಉತ್ಸವ ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಿಸಿಕೊಳ್ಳುತ್ತಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. 9 ದಿನಗಳ ಕಾಲ ವಿಭಿನ್ನವಾಗಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬರುವವರನ್ನು ಈ ಬಾರಿ ಪಟ್ಟಣದಲ್ಲಿ ಕಸದ ರಾಶಿ ಸ್ವಾಗತಿಸಲಿದೆ. ಹೊಂಡಮಯ ರಸ್ತೆ ಸುಸ್ತು ಮಾಡಲಿದೆ. ಗೋಣಿಕೊಪ್ಪಲು ಪಟ್ಟಣದಿಂದ ಕೇವಲ 1 ಕಿ.ಮೀ. ದೂರದ ರಸ್ತೆ ಮಾತ್ರ ಉತ್ತಮವಾಗಿದೆ. ಉಳಿದ ರಸ್ತೆಗಳ ಸ್ಥಿತಿ ಶೋಚನೀಯ. 

ಸೀಗೆತೋಡಿನಿಂದ ಕೀರೆಹೊಳೆ ಸೇತುವೆಯವರೆಗೆ ರಸ್ತೆಯೇ ಇಲ್ಲದಂತಾಗಿದೆ. ಇಂಥ ರಸ್ತೆಯಲ್ಲಿ ಆಟೊ ಚಾಲಕರಿಗೆ ನರಕಯಾತನೆ ಎದುರಾಗುತ್ತಿದ್ದರೆ ಪ್ರಯಾಣಿಕರ ಸ್ಥಿತಿ ಇನ್ನೂ ಭೀಕರವಾಗಿದೆ. ಇತ್ತ ವಿರಾಜಪೇಟೆ–ಗೋಣಿಕೊಪ್ಪಲು ರಸ್ತೆಯಂತೂ ತೀರಾ ದುಸ್ಥಿತಿಗೆ  ಈಡಾಗಿದೆ. 15 ಕಿ.ಮೀ. ದೂರದ ರಸ್ತೆಯಲ್ಲಿ ಹೊಂಡ ಉಂಟಾಗಿ ಎರಡು ವರ್ಷಗಳೇ ಕಳೆದಿವೆ.

ಕಳೆದ ವರ್ಷ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಹೇಳಿ ರಸ್ತೆ ಬದಿಯ ಮರಗಳನ್ನೆಲ್ಲ ಧರೆಗುರುಳಿಸಿ ಬಯಲು ಮಾಡಿದರು. ಆದರೆ ದುರಸ್ತಿ ಹೋಗಲಿ ಕನಿಷ್ಠ ಹೊಂಡ ಕೂಡ ಮುಚ್ಚಲಿಲ್ಲ. ಕಸದ ರಾಶಿಗೆ ಮುಕ್ತಿಯೇ ಇಲ್ಲ. ಎಲ್ಲೆಂದರಲ್ಲಿ ತಿಪ್ಪೆಯದ್ದೇ ಸಾಮ್ರಾಜ್ಯ. ಕಸ ಹಾಕಲು ಇಟ್ಟಿರುವ ತೊಟ್ಟಿಗಳು ತಲೆ ಕೆಳಗಾಗಿ ಬಿದ್ದಿವೆ. ಕಸದ ರಾಶಿಯನ್ನು ಬೀದಿ ಬದಿಯಲ್ಲೇ ಸುರಿಯಲಾಗಿದ್ದು ದುರ್ವಾಸನೆ ಹರಡಿದೆ. 

ಬಸ್‌ ನಿಲ್ದಾಣದ ಸ್ಥಿತಿಯನ್ನಂತೂ ಹೇಳಲಾಗದು. ತಂಗುದಾಣದ ಹಳೆಯ ಕಟ್ಟಡ ಯಾವಾಗ ಕುಸಿದು ಬೀಳುವುದೋ ಎಂಬ ಆತಂಕ ಕಾಡುತ್ತಿದೆ. ಶೌಚಾಲಯದತ್ತ ಮುಖ ಮಾಡಲಾಗುತ್ತಿಲ್ಲ. ನೀರಿನ ಕೊರತೆ ಕಾಡುತ್ತಿದೆ.   ಕಳೆದ ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿ ನೂತನ ಕಟ್ಟಡ  ನಿರ್ಮಾಣಗೊಳ್ಳಲಿದೆ ಎಂದು ಸಬೂಬು ಹೇಳುತ್ತಲೇ ಬಂದಿತು. ಆದರೆ ಈ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯೂ ಇಲ್ಲ.

ಗ್ರಾಮಸಭೆಗಳಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಬಸ್‌ ನಿಲ್ದಾಣದ ಸಮಸ್ಯೆ ನೆನಪಾಗುತ್ತದೆ. ಬಳಿಕ ಮರೆತೇ ಹೋಗುತ್ತದೆ. ಬಡ ಪ್ರಯಾಣಿಕರ ತಂಗುದಾಣದ ಸಮಸ್ಯೆಯ ಪರಿಹಾರ ಯಾರಿಗೂ ಬೇಕಾಗಿಲ್ಲ. ಪ್ರತಿ ವರ್ಷ ಆರ್‌ಎಂಸಿಯಿಂದ ಮುಖ್ಯ ರಸ್ತೆಯಲ್ಲಿ ಸಾಗಿಬರುವ ಮೆರವಣಿಗೆಗೆ ಭಾರಿ ಹೊಂಡ,  ಇಕ್ಕೆಲಗಳಲ್ಲಿ ಸುರಿದಿರುವ ಕಸದ ರಾಶಿ ದುರ್ವಾಸನೆಯ ಸ್ವಾಗತ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.