ಕುಶಾಲನಗರ: ಎಂಜಿನಿಯರಿಂಗ್ ಪದವಿ ಪಡೆಯುವುದೆಂದರೆ ಲಕ್ಷಾಂತರ ರೂಪಾಯಿ ಶುಲ್ಕ ಭರಿಸಬೇಕಾದಂತಹ ಕಾಲವೊಂದಿತ್ತು. ಆ ಸ್ಥಿತಿ ಖಾಸಗಿ ಕಾಲೇಜುಗಳಲ್ಲಿ ಈಗಲೂ ಇದೆ. ಬಡವರ ಮಕ್ಕಳು ಕೂಡ ಎಂಜಿನಿಯರಿಂಗ್‌ನಂತಹ ಉನ್ನತ ಶಿಕ್ಷಣವನ್ನು ಪಡೆಯಲಿ ಎನ್ನುವ ಸದುದ್ದೇಶದಿಂದ ಸರ್ಕಾರವು ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆದಿದೆ. ಈ ನಿಟ್ಟಿನಲ್ಲಿ ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೂಡ ಒಂದಾಗಿದೆ.
ರಾಜ್ಯದಲ್ಲಿ ಹಿಂದೆ ಇದ್ದಂತಹ ಬಿಜೆಪಿ ಸರ್ಕಾರವು 2007-08ನೇ ಸಾಲಿನಲ್ಲಿ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿತು. ಇದರಲ್ಲಿ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೂಡ ಒಂದಾಗಿದೆ. ಇಲ್ಲಿ ಕೇವಲ ರೂ 18,090 ರೂಪಾಯಿ ಶುಲ್ಕ ಪಾವತಿಸಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.
ಇನ್ನು ಆದಾಯ ಮಿತಿ 11,000 ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಸರ್ಕಾರವು 15,000 ರೂಪಾಯಿ ಶುಲ್ಕವನ್ನು ವಾಪಸ್ ಮಾಡುತ್ತದೆ. ಅಂದರೆ 11 ಸಾವಿರ ರೂಪಾಯಿ ಕುಟುಂಬದ ಆದಾಯ ಇರುವ ವಿದ್ಯಾರ್ಥಿಗಳು ಕೇವಲ 3,090 ರೂಪಾಯಿ ಶುಲ್ಕ ಮಾತ್ರ ಭರಿಸಬೇಕಾಗುತ್ತದೆ. ಇನ್ನೂ ವಿಶೇಷವೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಕೇವಲ ಪರೀಕ್ಷಾ ಶುಲ್ಕ 540 ರೂಪಾಯಿ ಪಾವತಿಸಿದರೆ ಸಾಕು ಎಂಜಿನಿಯರಿಂಗ್ ಪದವಿ ಪಡೆಯಬಹುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ 1,500 ರಿಂದ 2,000 ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಸೂಪರ್ ನಾಮೆರೆರಿ ಅಡಿಯಲ್ಲಿ ಬರುವ ಶೇಕಡಾ 5 ರಷ್ಟು ಮಕ್ಕಳಿಗೆ ಆದಾಯ ಮಿತಿ ರೂ 2 ಲಕ್ಷದವರೆಗೆ ಇದ್ದರೂ ಸರ್ಕಾರ 15,000 ರೂಪಾಯಿ ವಾಪಸ್ ನೀಡುತ್ತದೆ. ಹೀಗಾಗಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಎಜಿಂನಿಯರಿಂಗ್ ಪದವಿ ಪಡೆಯಲು ಸಾಧ್ಯ. ಒಟ್ಟಾರೆ ಬಡ ಪ್ರತಿಭಾವಂತ ಮಕ್ಕಳಿಗೆ ಎಂಜಿನಿಯರಿಂಗ್ ಪದವಿ ಪಡೆಯಲು ಇದೊಂದು ವರದಾನವೆಂದರೆ ತಪ್ಪಾಗಲಿಕ್ಕಿಲ್ಲ.
ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ: ಕಾಲೇಜಿನಲ್ಲಿ ವಿವಿಧ ವಿಭಾಗಗಳ ಒಟ್ಟು 252 ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಈ ಸೀಟುಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಕಾಲೇಜಿನ ಒಟ್ಟು ಸೀಟುಗಳಲ್ಲಿ ಶೇಕಡಾ 60 ರಷ್ಟು ವಿದ್ಯಾರ್ಥಿಗಳು ಸ್ಥಳೀಯರೆಂಬುದು ವಿಶೇಷ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆದ್ದರಿಂದ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶವಿಲ್ಲ. ಆದರೆ ಹೊರ ಜಿಲ್ಲೆಯ ಶೇಕಡಾ 40 ವಿದ್ಯಾರ್ಥಿಗಳಿಗೆ ಸೀಟುಗಳು ಮೀಸಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.