ADVERTISEMENT

20 ಲಕ್ಷ ಮೌಲ್ಯದ ಮರಳು, ಹಿಟಾಚಿ ವಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 9:05 IST
Last Updated 10 ಮಾರ್ಚ್ 2011, 9:05 IST

ಸೋಮವಾರಪೇಟೆ: ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳ ಕೆಲವು ಸ್ಥಳಗಳ ಮೇಲೆ ಜಾಗಗಳ ಮೇಲೆ ಉಪವಿಭಾಗಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ 20 ಲಕ್ಷ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡು, 87 ಲಕ್ಷ ರೂ. ಬೆಲೆಯ ಹಿಟಾಚಿ ಯಂತ್ರವನ್ನು ಮುಟ್ಟುಗೋಲು ಹಾಕಿಕೊಂಡಿದೆ.  |

ಶನಿವಾರಸಂತೆ ಸಮೀಪದ ಬೆಂಬಳೂರು ಊರುಗುತ್ತಿ ಗ್ರಾಮದ ಕ್ಯಾತೆ ಹೊಳೆಯಿಂದ ಅಕ್ರಮವಾಗಿ ತೆಗೆದು ಸಂಗ್ರಹಿಸಿಟ್ಟಿದ್ದ ಸುಮಾರು 2500 ಮೆಟ್ರಿಕ್ ಟನ್ ಮರಳನ್ನು ದಾಳಿ ನಡೆಸಿದ ತಂಡವು ವಶಪಡಿಸಿಕೊಂಡಿದೆ. ಈ ಅಕ್ರಮ ದಂಧೆಯಲ್ಲಿ ತೊಡಗಿದ ಭಗವಾನ್ ಎಂಬವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಂಡದಲ್ಲಿದ್ದ ಡಿವೈಎಸ್ಪಿ ಜಯಪ್ರಕಾಶ್‌ಗೆ ಉಪವಿಭಾಗಾಧಿಕಾರಿಗಳು ನಿರ್ದೇಶಿಸಿದರು.

ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮರಳು ದಾಸ್ತಾನು ಮಾಡಿದ ಆರೋಪದ ಮೇಲೆ ನಾಣಯ್ಯ, ಮಂಜು ಮತ್ತು ಚಂದ್ರಶೇಖರ್ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಡಾ.ಎಂ.ಆರ್.ರವಿ ಸೂಚಿಸಿದರು. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳಲ್ಲಿ ಮರಳು ತೆಗೆಯುವ ಕಾರ್ಯವನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡವರೂ ಸಹ ಮಾ. 7 ರಿಂದ ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಭಾಗದಲ್ಲಿ ಅಕ್ರಮ ಮರಳು ದಂಧೆಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಮರಳು ಲೂಟಿಯಾಗುತ್ತಿರುವ ಕುರಿತು ಸಾರ್ವಜನಿಕರು ಈ ಹಿಂದೆ ದೂರು ಸಲ್ಲಿಸಿದ್ದರು.

ಊರುಗುತ್ತಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಖಾಸಗಿ ಜಮೀನಿನಲ್ಲಿ ಪರವಾನಗಿಯಿಲ್ಲದೆ ಅಕ್ರಮವಾಗಿ ರಸ್ತೆ ಮಾಡಿಕೊಂಡಿರುವುದನ್ನು ಉಪವಿಭಾಗಾಧಿಕಾರಿಗಳು ಗಮನಿಸಿದರು. ಇದರ ಬಗ್ಗೆ ಸಂಬಂಧಿಸಿದ ಭೂಮಾಲೀಕರಿಗೆ ನೋಟಿಸ್ ನೀಡಬೇಕೆಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ವಶ ಪಡಿಸಿಕೊಂಡಿರುವ ಮರಳನ್ನು ಯಾರೂ ಕದ್ದು ಸಾಗಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಳಿಕ ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದ ಕೊಡ್ಲಿಪೇಟೆ ಹೋಬಳಿಯ ಮಲಗನಹಳ್ಳಿ ಗ್ರಾಮದಲ್ಲಿ ದಾಳಿ ನಡೆಸಿದರು. ಇಲ್ಲಿ ಜಲಾಶಯದ ನೀರಿನ ಪ್ರಮಾಣ ಇನ್ನೂ ಇಳಿಮುಖವಾಗದ ಕಾರಣ ಅಕ್ರಮ ಮರಳಿನ ದಂಧೆ ಪ್ರಾರಂಭಗೊಂಡಿರಲಿಲ್ಲ. ಆದರೆ ಬೇಸಿಗೆ ಆರಂಭವಾದಂತೆ ನೀರು ಇಳಿಮುಖವಾದಾಗ ಮರಳುಗಾರಿಕೆ ನಡೆಯುವ ಸಂಭವ ಇರುವುದರಿಂದ ಇದರ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಹೇಳಿದರು.

ಈ ಕಾರ್ಯಾಚರಣೆಯಲ್ಲಿ ಮಡಿಕೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಎನ್.ಎ.ಹ್ಯಾರಿ, ತಹಶೀಲ್ದಾರ್ ಎ.ದೇವರಾಜ್, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ವಿ.ಕೃಷ್ಣಯ್ಯ, ಶನಿವಾರಸಂತೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಮಾದೇವಯ್ಯ ಹಾಗೂ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.