ADVERTISEMENT

2013– ಕೊಡಗಿಗೆ ತಲ್ಲಣ ಮೂಡಿಸಿದ ವರ್ಷ!

ಪ್ರಕೃತಿ ಮುನಿಸು– ಪರಿಸರವಾದಿಗಳ ನಡುವೆ ನಲುಗಿದ ಕೊಡಗು

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 8:25 IST
Last Updated 1 ಜನವರಿ 2014, 8:25 IST
ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೂರ್ಲಬ್ಬಿಯಲ್ಲಿ ರಸ್ತೆ ಕುಸಿದಿರುವ ದೃಶ್ಯ.
ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೂರ್ಲಬ್ಬಿಯಲ್ಲಿ ರಸ್ತೆ ಕುಸಿದಿರುವ ದೃಶ್ಯ.   

ಮಡಿಕೇರಿ: ಸರಿದುಹೋಗಿರುವ 2013ರ ವರ್ಷವು ಕೊಡಗು ಜಿಲ್ಲೆಯ ಪಾಲಿಗೆ ಸಿಹಿಗಿಂತ ಹೆಚ್ಚು ಕಹಿಯ ಅನುಭವವನ್ನೇ ನೀಡಿದೆ. ಒಂದೆಡೆ ಪ್ರಕೃತಿ ವಿಕೋಪ, ಮತ್ತೊಂದೆಡೆ ಪರಿಸರ ರಕ್ಷಣೆಯ ಹೆಸರಿನಲ್ಲಿ ಬಂದ ವರದಿಗಳು ಜಿಲ್ಲೆಯ ಜನರನ್ನು ಹೈರಾಣಾಗಿಸಿದವು.
 
ಮತ್ತೊಂದೆಡೆ ಸಹಕಾರ ಸಂಘಗಳಿಗೆ, ಪಟ್ಟಣ ಪಂಚಾಯಿತಿಗಳಿಗೆ, ನಗರಸಭೆಯಿಂದ ವಿಧಾನಸಭೆಯವರೆಗೂ ಚುನಾವಣೆ ನಡೆದ ವರ್ಷವಿದು. ವರ್ಷದ ಆರು ಕಾಲ ಚುನಾವಣೆಯ ಅಬ್ಬರ ಮೆರೆದಿತ್ತು. ಮಡಿಕೇರಿ ನಗರಸಭೆಯನ್ನು ಹೊರತುಪಡಿಸಿದರೆ ಉಳಿದೆಲ್ಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿಗೆ ಇದು ಆಶಾದಾಯಕ ವರ್ಷವಾಗಿತ್ತು.

ವರ್ಷದ ಆರಂಭದಿಂದಲೂ ಒಂದಿಲ್ಲೊಂದು ವಿಷಯಕ್ಕೆ ಪ್ರತಿಭಟನೆಗಳು ನಿರಂತರವಾಗಿ ನಡೆದವು. ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಮಾಧವ್‌ ಗಾಡ್ಗೀಳ್‌ ವರದಿ,  ಕಸ್ತೂರಿ ರಂಗನ್‌ ವರದಿಗೆ ವಿರೋಧ, ಅರಣ್ಯದಲ್ಲಿ ಭೂಮಿ ಹಕ್ಕು ಪತ್ರ ನೀಡುವಂತೆ ಆದಿವಾಸಿಗಳ ಹೋರಾಟ, ಕೋವಿ ವಿನಾಯಿತಿ ಹಕ್ಕು, ಕೊಡವ ಲ್ಯಾಂಡ್‌ಗೆ ಸ್ವಾಯತ್ತತೆ ಒತ್ತಾಯಿಸಿ ವರ್ಷವಿಡೀ ಹೋರಾಟಗಳು ನಡೆದವು. ವರ್ಷವಿಡೀ ಚರ್ಚೆಗೆ ಬಂದ ಕೆಲವು ವಿಷಯಗಳ ಪಟ್ಟಿ ಇಲ್ಲಿದೆ.

ಮಳೆಯ ಅಬ್ಬರ
ಇತ್ತೀಚೆಗೆ ಕಂಡುಕೇಳರಿಯದ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರು, ಕೃಷಿಕರು ನಲುಗಿಹೋದರು. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ ಅನುಭವಿಸಿದರು. ಸೂಕ್ತವಾಗಿ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತೋರಿದ ನಿರ್ಲಕ್ಷ್ಯದಿಂದಾಗಿ ಜನರು ಕಂಗಾಲಾಗಿ ಹೋದರು.

ಜಿಲ್ಲೆಯ ಏಕೈಕ ಜಲಾಶಯವಾಗಿರುವ ಹಾರಂಗಿ ಜಲಾಶಯವು ಜುಲೈ 1ರಂದು ಭರ್ತಿಯಾಗಿತ್ತು. ಮಳೆಗಾಲ ಆರಂಭವಾದ ತಿಂಗಳೊಳಗೆ ಭರ್ತಿಯಾಗಿತ್ತೆಂದರೆ ಯಾವ ಪ್ರಮಾಣದಲ್ಲಿ ಮಳೆ ಸುರಿದಿರಬಹುದು ಎನ್ನುವುದನ್ನು ಊಹಿಸಲಿಕ್ಕೂ ಸಾಕು.

ಭಾಗಮಂಡಲದಲ್ಲಿ ಜೂನ್‌ ತಿಂಗಳೊಂದರಲ್ಲಿ 1,681 ಮಿ.ಮೀ. ಮಳೆ ಸುರಿದಿದ್ದು, 20 ವರ್ಷಗಳಲ್ಲಿಯೇ ಅಧಿಕ ಎನ್ನಲಾಗುತ್ತಿದೆ.
ಒಂದೆಡೆ ಉತ್ತಮ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಮಳೆಯ ಅವಘಡಗಳಿಗೆ ಸಿಲುಕಿದ ಕೊಡಗು ಜಿಲ್ಲೆಯು ತತ್ತರಿಸಿ ಹೋಯಿತು.

ಮಳೆ ನೀರಿಗೆ ಕೊಚ್ಚಿ ಹೋದ 6 ಜನರು ಹಾಗೂ 33 ಜಾನುವಾರುಗಳು ಪ್ರಾಣ ಕಳೆದುಕೊಂಡರು. ಬೆಳೆ ನಷ್ಟ, ಕಾಫಿ ಉದುರುವಿಕೆ, ನೂರಾರು ಮನೆಗಳು, ರಸ್ತೆ ಕುಸಿತ, ವಿದ್ಯುತ್‌ ಕಂಬಗಳಿಗೆ ಹಾನಿ ಸೇರಿದಂತೆ 86 ಕೋಟಿ ರೂಪಾಯಿಗೂ ಹೆಚ್ಚು ಹಾನಿಯಾಗಿದೆ ಎಂದು ಜಿಲ್ಲಾಡಳಿತವು ಪ್ರಕೃತಿ ವಿಕೋಪ ಅಧ್ಯಯನ ಕೇಂದ್ರ ತಂಡಕ್ಕೆ  ವರದಿ ನೀಡಿತ್ತು.

ಪ್ರಯೋಜನವಾಗದ ‘ಜಮ್ಮಾ’ ತಿದ್ದುಪಡಿ
ಜಮ್ಮಾ ಬಾಣೆ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿ ಹಲವು ವರ್ಷಗಳ ಕಾಲ ನಡೆದ ಹೋರಾಟಕ್ಕೆ ಜಯ ಸಿಕ್ಕ ವರ್ಷವಿದು. ಜಮ್ಮಾ ಬಾಣೆ ಜಾಗಕ್ಕೂ ಕಂದಾಯ ವಿಧಿಸಲು ಅನುವು ಮಾಡಿಕೊಡುವ ಕರ್ನಾಟಕ ಭೂ ಕಂದಾಯ 1964ರ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ ಅವರ ಪ್ರಯತ್ನದ ಫಲವಾಗಿ 2011ರಲ್ಲಿ ವಿಧಾನಸಭೆಯು ಅಂಗೀಕಾರ ನೀಡಿತ್ತು. ಅಂತಿಮವಾಗಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜನವರಿ 22ರಂದು ಅಂಕಿತ ಹಾಕುವ ಮೂಲಕ ಎಲ್ಲ ಅಡ್ಡಿಗಳನ್ನು ನಿವಾರಿಸಿದ್ದರು.

ಕಾಯ್ದೆಗೆ ತಿದ್ದುಪಡಿಯಾಗಿ ಒಂದು ವರ್ಷ ಕಳೆಯುತ್ತ ಬಂದರೂ ಇದುವರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಈ ಕಾಯ್ದೆಯಡಿ ಜಮ್ಮಾ ಜಾಗಕ್ಕೆ ಕಂದಾಯ ವಿಧಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ನಾಗರಿಕರು  ದೂರುತ್ತಿದ್ದಾರೆ.

ನಕ್ಸಲರ ಜಾಡು
2012ರ ಅಂತ್ಯದಲ್ಲಿ ಕಂಡುಬಂದಿದ್ದ ನಕ್ಸಲರ ಓಡಾಟ 2013ರಲ್ಲೂ ಮುಂದುವರಿದಿತ್ತು. ಮಡಿಕೇರಿ ಸೇರಿದಂತೆ ವಿರಾಜಪೇಟೆ, ಸೋಮವಾರಪೇಟೆ ವ್ಯಾಪ್ತಿಯಲ್ಲೂ ನಕ್ಸಲರ ಓಡಾಟ ಕಂಡುಬಂದಿತ್ತು. ನಕ್ಸಲರನ್ನು ನಿಗ್ರಹಿಸಲೆಂದು ಕುಟ್ಟದ ಬಳಿ ನಕ್ಸಲ್‌ ನಿಗ್ರಹ ಪಡೆಯ ಕ್ಯಾಂಪ್‌ನ್ನು ತೆರೆಯಲಾಗುತ್ತಿದೆ.

ತಿಂಗಳ ಕಾಲ ಅನ್ನದಾನ
ಜೀವನದಿ ಕಾವೇರಿ ಉಗಮಸ್ಥಳವಾಗಿರುವ ತಲಕಾವೇರಿಯಲ್ಲಿ  ತುಲಾಸಂಕ್ರಮಣ ಮಾಸದ ನಿಮಿತ್ತ ಅ. 17ರಿಂದ ನ.16ರವರೆಗೆ ಒಂದು ತಿಂಗಳ ಕಾಲ ತಲಕಾವೇರಿ– ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯು ಅನ್ನದಾನ ಮಾಡಿತ್ತು. ಇದೇ ಮೊದಲ ಬಾರಿಗೆ ಪೂರ್ತಿ ಒಂದು ತಿಂಗಳ ಕಾಲ ದೇವಾಲಯ ಸಮಿತಿಯು ಅನ್ನದಾನ ನಡೆಸಿತ್ತು. ಪ್ರತಿದಿನ ಒಂದೊಂದು ಕುಟುಂಬದವರ ಸಹಾಯದಿಂದ ಅನ್ನದಾನ ನಡೆಸಲಾಗಿತ್ತು.

ಈ ಬಾರಿ ತಮಗೆ ಅನ್ನದಾನದ ಅವಕಾಶ ನೀಡಬೇಕೆಂದು ಕೊಡಗು ಏಕೀಕರಣ ರಂಗವು ಜಿಲ್ಲಾಡಳಿತವನ್ನು ಕೋರಿತ್ತು. ದೇವಾಲಯ ಸಮಿತಿ ಹಾಗೂ ರಂಗದವರ ನಡುವೆ ಒಮ್ಮತ ಮೂಡಿಸಲು ಜಿಲ್ಲಾಧಿಕಾರಿ ಅನುರಾಗ್‌ ತಿವಾರಿ ಸಾಕಷ್ಟು ಶ್ರಮ ವಹಿಸಿದ್ದನ್ನು ಸ್ಮರಿಸಬಹುದು.

ಆರ್‌ಟಿಒ ಸ್ಥಳಾಂತರ
ಹಲವು ವರ್ಷಗಳ ಬೇಡಿಕೆಯಂತೆ ಮಡಿಕೇರಿಯ ಜನರಲ್‌ ತಿಮ್ಮಯ್ಯ ಅವರ ಹುಟ್ಟುಮನೆಯಾದ ಸನ್ನಿಸೈಡ್‌ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್‌ಟಿಒ ಕಚೇರಿಯು ಅಬ್ಬಿಫಾಲ್ಸ್‌ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಹೊಸ ಕಚೇರಿಗೆ ಜೂನ್‌ 24ರಂದು ಸ್ಥಳಾಂತರಗೊಂಡಿತು. ಆರ್‌ಟಿಒ ಕಚೇರಿಯನ್ನು ತೆರವುಗೊಳಿಸಬೇಕು ಹಾಗೂ ಈ ಕಟ್ಟಡದಲ್ಲಿ ಜನರಲ್‌ ತಿಮ್ಮಯ್ಯ ಅವರ ಸಂಗ್ರಹಾಲಯವನ್ನು ನಿರ್ಮಿಸಬೇಕೆಂದು ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂ ಪದಾಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದನ್ನು ಸ್ಮರಿಸಬಹುದು.

ಕುಂಡಾಮೇಸ್ತ್ರಿ ಯೋಜನೆ
ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಕುಂಡಾಮೇಸ್ತ್ರಿ ಯೋಜನೆಯು ನಿಗದಿಯಂತೆ 2013ರಲ್ಲಿ ಪೂರ್ಣಗೊಳ್ಳಲಿಲ್ಲ. ನಗರಸಭೆಯ ಪ್ರತಿ ಸಭೆಯಲ್ಲೂ ವಿರೋಧ ಪಕ್ಷದ ಸದಸ್ಯರು ಈ ವಿಷಯವನ್ನು ಚರ್ಚಿಸುತ್ತಿದ್ದರು. ಇದರ ಬಗ್ಗೆ ವಿಧಾನಪರಿಷತ್ತಿನಲ್ಲೂ ಬಿಸಿಬಿಸಿ ಚರ್ಚೆ ನಡೆಯಿತು. ಜುಲೈ ತಿಂಗಳಿನಲ್ಲಿ ನಡೆದ ವಿಧಾನಪರಿಷತ್‌ ಅಧಿವೇಶನದಲ್ಲಿ ಸದಸ್ಯ ಎಂ.ಸಿ. ನಾಣಯ್ಯ ಅವರು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆರಂಭದಲ್ಲಿ ₨ 7.50 ಕೋಟಿ ವೆಚ್ಚದಲ್ಲಿ ಯೋಜನೆಯು ಸಿದ್ಧಗೊಂಡಿತ್ತು.

ಆದರೆ, ದಿನ ಕಳೆದಂತೆ ಯೋಜನಾ ವೆಚ್ಚವೂ ಈಗ 86 ಕೋಟಿ ರೂಪಾಯಿಗೆ ತಲುಪಿತು. ಈಗಾಗಲೇ 26 ಕೋಟಿ ರೂಪಾಯಿ ಹೊಂದಿಸಲಾಗಿದ್ದು, ಇನ್ನೂ 60 ಕೋಟಿ ರೂಪಾಯಿ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಇದನ್ನು ತಕ್ಷಣ ನಿಲ್ಲಿಸಿ ಬೇತ್ರಿ ಯೋಜನೆಗೆ ಚಾಲನೆ ನೀಡಬೇಕೆಂದು’ ಜಿಲ್ಲೆಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಕೂಗು ಕೇಳಿಬಂದಿತು.ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಈ ಕೂಗಿಗೆ ಇನ್ನಷ್ಟು ಬಲಬಂದಿತು. ಪ್ರಸ್ತುತ ಬೇತ್ರಿ ಯೋಜನೆ ಕುರಿತಂತೆ ಸರ್ವೇ ಕಾರ್ಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.