ಸುಂಟಿಕೊಪ್ಪ: ವಾಹನ ಚಾಲಕರ ಸಂಘದ ವೇದಿಕೆಯ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ₹50 ಲಕ್ಷ ವೆಚ್ಚದಲ್ಲಿ ಚಾವಣಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಮಂತರ್ ಗೌಡ ಹೇಳಿದರು.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ 55ನೇ ವರ್ಷದ ಸಂಭ್ರಮದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಒಂದು ವೇದಿಕೆಗೆ ಮಾಜಿ ಮುಖ್ಯಮಂತ್ರಿ ಗುಂಡೂರಾಯರು ಹಲವು ಬಾರಿ ಆಗಮಿಸಿ ಸಂತೋಷ ವ್ಯಕ್ತಪಡಿಸಿದ್ದರು. ಅವರ ಹೆಸರು ಉಳಿಯಬೇಕಾದರೆ ಇಂತಹ ಕೆಲಸ ಮಾಡಲೇಬೇಕಾಗುತ್ತದೆ ಎಂದರು.
ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ, ಈ ವೇದಿಕೆಯ ಮೂಲಕ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಹಾಗೂ ನಡೆಯಬೇಕಾಗಿದೆ. ಈ ವೇದಿಕೆಯನ್ನು ಬೇಡಿಕೆಯ, ಅಭಿವೃದ್ಧಿಯ ಕೇಂದ್ರ ಎಂಬುದಾಗಿ ಬಣ್ಣಿಸುವುದರಲ್ಲಿ ಅರ್ಥವಿದೆ. ಎಲ್ಲಾ ಧರ್ಮ, ಜಾತಿ, ಜನಾಂಗದವರು ಸೇರಿ ಜಾತ್ಯತೀತತೆಯ ನೆಲೆಗಟ್ಟಿನ ಮೇಲೆ ಆಚರಿಸುವ ಈ ಆಯುಧ ಪೂಜೆ ಎಲ್ಲರ ಆ ಬದುಕಿನಲ್ಲೂ ಬೆಳಕಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಜಾತಿ ಧರ್ಮವನ್ನು ಬದಿಗಿಟ್ಟು ಆಚರಿಸುವ ಏಕೈಕ ಹಬ್ಬ ಆಯುಧ ಪೂಜೆ. ಕಳೆದ 55 ವರ್ಷಗಳಿಂದ ನಿರಂತರವಾಗಿ ವಾಹನ ಚಾಲಕರ ಸಂಘದವರು ಈ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ತಮ್ಮ ಕಾಲಾವಧಿಯಲ್ಲಿ ಆಸ್ಪತ್ರೆ, ನೀರಿನ ವ್ಯವಸ್ಥೆ, ಶಾಲಾ ಕಟ್ಟಡ, ಮಾರುಕಟ್ಟೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಜನರ ಸೇವೆ ಮಾಡಲಾಗಿದೆ. ತಮ್ಮ ಕಾಲಾವಧಿಯಲ್ಲಿ ಮಾರುಕಟ್ಟೆಯ ಸ್ಥಳಾಂತರಕ್ಕೆ ಅನುದಾನವನ್ನು ಕೂಡ ಬಿಡುಗಡೆಗೊಳಿಸಲಾಗಿದ್ದು, ಈ ಬಗ್ಗೆ ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿಕೊಂಡರು.
ಕನ್ನಡ ಚಲನಚಿತ್ರ ಹಾಸ್ಯ ನಟ ಟೆನ್ನಿಸ್ ಕೃಷ್ಣ ಮಾತನಾಡಿ, ತಮ್ಮ ಜೀವನದಲ್ಲೇ ಇದೇ ಮೊದಲ ಬಾರಿಗೆ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. ಕೊಡಗಿನ ಸೋಮವಾರಪೇಟೆಯ ಅಳಿಯನಾಗಿ ಹೇಳುವುದದರೆ ಕೊಡಗಿನ ಸಂಸ್ಕೃತಿ ಅಪರೂಪ ಮತ್ತು ಅದ್ವಿತೀಯ ಎಂದರು.
ಒಕ್ಕಲಿಗ ಗೌಡ ಸಂಘದ ಕಾರ್ಯಧ್ಯಕ್ಷ ಹರಪ್ಪಳ್ಳಿ ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಎಂ.ಲತೀಫ್, ಬಿ.ಬಿ.ಭಾರತೀಶ್, ಗಾಮ ಪಂಚಾಯತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ವಿ.ಜಿ.ಲೋಕೇಶ್, ಉಪಾಧ್ಯಕ್ಷೆ ಶಿವಮ್ಕ, ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜರ್ಮಿ ಡಿಸೋಜ, ಮುಖಂಡರಾದ ಕ್ಲಾಡಿಯಸ್ ಲೋಬೋ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಡಿ.ದೇವರಾಜು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಶೈನಿಂಗ್ ಸ್ಟಾರ್ ಮೆಲೋಡಿ ಗೈಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ, ಮಿಮಿಕ್ರಿ ಗೋಪಿ ಮತ್ತು ವಿಕ್ಟರ್ ವಾಸು ತಂಡದಿಂದ ಮಿಮಿಕ್ರಿ ಕಾರ್ಯಕ್ರಮ ಜನಸೂರೆಗೊಂಡಿತು.
ಹಲವಾರು ಸಿನಿಮಾಗಳಲ್ಲಿ ವಾದ್ಯಗೋಷ್ಠಿಯಲ್ಲಿದ್ದ ದೇವ್ ಅವರ ವಾದ್ಯಗೋಷ್ಠಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.