ADVERTISEMENT

52 ಕಿಂಡಿ ಆಣೆಕಟ್ಟು ನಿರ್ಮಾಣ: ಸುನೀಲ್‌

ಬೋಳ: ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 12:44 IST
Last Updated 6 ಮಾರ್ಚ್ 2018, 12:44 IST

ಕಾರ್ಕಳ: ಸರ್ಕಾರದ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ತಾಲ್ಲೂಕಿನ ಬೋಳ ಪಂಚಾಯಿತಿ ಸಭಾ ಭವನದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ‘ತಾಲ್ಲೂಕಿನ ಅಭಿವೃದ್ಧಿ ಚಟುವಟಿಕೆಯು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ತಾಲ್ಲೂಕಿನದ್ಯಾಂತ 52 ಕಿಂಡಿ ಆಣೆಕಟ್ಟುಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. 32 ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ. ಇದರಲ್ಲಿ ಬೋಳ ಗ್ರಾಮಕ್ಕೆ 2 ಸೇತುವೆಯ ಮಂಜೂರಾತಿ ದೊರೆತಿದ್ದು, ಅದರಲ್ಲಿ ಒಂದು ಸೇತುವೆ ಈಗಾಗಲೇ ನಿರ್ಮಾಣವಾಗಿದೆ. ಇನ್ನೊಂದು ಸೇತುವೆ ಶೀಘ್ರ ನಿರ್ಮಾಣವಾಗಲಿದೆ’ ಎಂದರು.

ನನ್ನ ಅವಧಿಯಲ್ಲಿ 3ಸಾವಿರ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಬೋಳ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಯೋಜನೆ ಕೈಗೊಳ್ಳಲಾಗುವುದು ಎಂದರು.

ADVERTISEMENT

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವತಿಯಿಂದ 14 ಮಂದಿ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಹಕ್ಕುಪತ್ರ, ಸೋಲಾರ್ ಲೈಟ್‌ಗಳನ್ನು ವಿತರಿಸಲಾಯಿತು.

ಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಸ್ಯೆ ಪುಷ್ಪಾಸತೀಶ್ ಪೂಜಾರಿ, ವಲಯ ಅರಣ್ಯಾಕಾರಿ ಪ್ರಕಾಶ್ಚಂದ್ರ, ಬೋಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸದಾಶಿವ ಶೆಟ್ಟಿ, ವಂಜಾರಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಮ ಸಾಲ್ಯಾನ್, ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ಪೂಜಾರಿ, ಕಾರ್ಕಳ ಎಪಿಎಂಸಿ ಸದಸ್ಯೆ ವಸಂತಿ ಮೂಲ್ಯ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪಿಡಿಓ ಕೆ.ಬಿ.ಹರೀಶ್ ಸ್ವಾಗತಿಸಿದರು. ಪವನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.