ADVERTISEMENT

ನೀಲಗಿರಿ ಮರದಿಂದ ಅಂತರ್ಜಲ ಕುಸಿತ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 10:09 IST
Last Updated 20 ಜನವರಿ 2018, 10:09 IST

ಮಡಿಕೇರಿ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಆಹಾರ ನೀಡುವಂತಹ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ತೇಗ, ನೀಲಗಿರಿ ಮರಗಳನ್ನು ಬೆಳೆಸಿದ್ದು, ಇದರಿಂದ ಅಂತರ್ಜಲ ಕುಸಿಯುತ್ತಿದೆ. ಇದರಿಂದ ಅರಣ್ಯ ಪ್ರದೇಶವೂ ಬರಡಾಗುತ್ತಿದೆ. ತಕ್ಷಣ ಆ ಮರಗಳನ್ನು ತೆರವುಮಾಡಿ, ಕಾಡು ಜಾತಿಯ ಮರಗಳನ್ನು ಮಾತ್ರ ಬೆಳೆಸಬೇಕು. ವನ್ಯಪ್ರಾಣಿ ಸ್ನೇಹಿ ಮರಗಳಾದ ಮಾವು, ಹಲಸು, ಬಿದಿರು ಮತ್ತಿತರ ಹಣ್ಣಿನ ಗಿಡ– ಮರ ನೆಡಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರಲ್ಲಿ ಕೋರಿದರು.

ಕಾಡಿನಿಂದ ನಾಡಿಗೆ ಬಂದಿರುವ ವನ್ಯಮೃಗಗಳು ಹಾಗೂ ಕಾಡಾನೆಗಳು ರೈತರ ತೋಟದಲ್ಲಿ ಕಾಯಂ ಠಿಕಾಣಿ ಹೂಡಿವೆ. ಇದರಿಂದ ರೈತರ ಸಾಕಷ್ಟು ತೋಟಗಳು ಹಾನಿಗೆ ಒಳಗಾಗಿವೆ. ಕಾರ್ಮಿಕರೂ ಸಾವನ್ನಪ್ಪುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಾಡಾನೆಗಳನ್ನು ಮೊದಲು ಕಾಡಿಗೆ ವಾಪಸ್‌ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ನಾಡಿಗೆ ಆನೆಗಳು ಪ್ರವೇಶ ಮಾಡದಂತೆ ರೈಲ್ವೆ ಕಂಬಿ ಅಳವಡಿಕೆ, ಸೋಲಾರ್‌ ಬೇಲಿ ಹಾಗೂ ಗೇಟ್ ನಿರ್ಮಾಣ ಮಾಡಬೇಕು. ಅರಣ್ಯ ರಕ್ಷಣೆಗೆ ಹೆಚ್ಚಿನ ಕಾವಲುಗಾರರನ್ನು ನಿಯೋಜಿಸಬೇಕು. ವನ್ಯಪ್ರಾಣಿಗಳಿಂದ ಆಗಿರುವ ಹಾನಿಗೆ ಕೂಡಲೇ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪರಿಹಾರ ಕೋರಿ ಅರ್ಜಿ ಸಲ್ಲಿಸುವ ವೇಳೆ ಆರ್‌ಟಿಸಿ ಹಾಗೂ ಛಾಯಾಚಿತ್ರ ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎನ್ನುವ ನಿಯಮವಿದೆ. ಅವುಗಳನ್ನು ಹೊಂದಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ನಷ್ಟವಾಗಿರುವ ಪ್ರದೇಶದ ಸರ್ವೆ ನಂಬರ್‌ ಮಾತ್ರ ನಮೂದಿಸಲು ಆದೇಶ ನೀಡಬೇಕು. ಆರ್‌ಟಿಸಿ, ಛಾಯಾಚಿತ್ರಗಳನ್ನು ಇಲಾಖೆಯೇ ತನ್ನ ಖರ್ಚಿನಿಂದ ಭರಿಸಿ ಅರ್ಜಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಸಿದ್ದಾಪುರದ ಕೊಡವ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಈಚೆಗೆ ನಡೆದಿದ್ದ ರೈತರು, ಕಾರ್ಮಿಕರು ಹಾಗೂ ಅರಣ್ಯ ಹೋರಾಟ ಸಮಿತಿ ಸಭೆಯ ನಿರ್ಣಯದ ಪತ್ರಿಯನ್ನೂ ಅರಣ್ಯ ಇಲಾಖೆಗೆ ನೀಡಿ ಅನುಷ್ಠಾನಕ್ಕೆ ತಿಂಗಳ ಗಡುವು ನೀಡಲಾಯಿತು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರಾದ ಅಜ್ಜಮಾಡ ಚಂಗಪ್ಪ, ತೀತರಮಾಡ ಸುನೀಲ್, ಅಜ್ಜಮಾಡ ಸಿದ್ದು ಹಾಜರಿದ್ದರು.

* * 

ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ರೈಲು ಕಂಬಿ ಅಳವಡಿಕೆ, ಸೋಲಾರ್‌ ಬೇಲಿ ಹಾಗೂ ಗೇಟ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
– ಚೆಟ್ರುಮಾಡ ಸುಜಯ್ ಬೋಪಯ್ಯ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.