ADVERTISEMENT

ಕೊಡವ ಆಚಾರ, ವಿಚಾರ ಉಳಿಸಿ

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:44 IST
Last Updated 26 ಜನವರಿ 2018, 11:44 IST

ಮಡಿಕೇರಿ: ‘ಕೊಡವ ಭಾಷೆ ಮಾತನಾಡುವ ಎಲ್ಲರೂ ಒಟ್ಟುಗೂಡಿ ಈ ಭಾಷೆ, ಆಚಾರ– ವಿಚಾರಗಳನ್ನು ಉಳಿಸಲು ಶ್ರಮಿಸಬೇಕು’ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮನವಿ ಮಾಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಅರಸು ಭವನದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ಕೊಡವ ಭಾಷೆ ಮಾತನಾಡುವ 21 ಸಮಾಜಗಳು ಒಟ್ಟುಗೂಡಿ ಅಕಾಡೆಮಿ ವತಿಯಿಂದ ಏರ್ಪಡಿಸುವ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು. ಎಲ್ಲರೂ ಒಟ್ಟುಗೂಡಿದಾಗ ಕೊಡವ ಭಾಷೆ, ಸಾಹಿತ್ಯ ಸಂಸ್ಕೃತಿ ಉಳಿಸಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಣ್ಣಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ‘ಕೊಡವ ಭಾಷೆ ಮಾತನಾಡುವ ಸಮಾಜಗಳು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಮತ್ತಷ್ಟು ಪ್ರಗತಿ ಸಾಧಿಸಬೇಕು’ ಎಂದು ಹೇಳಿದರು.

ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್ ತಮ್ಮಯ್ಯ ಮಾತನಾಡಿ, ‘ಕೊಡವ ಭಾಷಿಕರೆಲ್ಲರೂ ವಿವಿಧ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಭಾಷೆಯ ನಾಟಕ, ಜಾನಪದ, ಸಂಗೀತ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು’ ಎಂದು ಕೋರಿದರು.

ಕುಡಿಯರ ಮುತ್ತಪ್ಪ ಮಾತನಾಡಿ, ‘ಕೊಡವ ಮೂಲ ನಿವಾಸಿಗಳು ಒಂದೆಡೆ ಸೇರುವಂತಾಗಬೇಕು. ಭಾಷೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕು. ಕೊಡವ ಭಾಷೆ ಮಾತನಾಡುವ ಎಲ್ಲರೂ ಜೊತೆಗೂಡಬೇಕು. ಇದರಿಂದ ಸಾಂಸ್ಕೃತಿಕ ವಿನಿಮಯವಾಗಲಿದೆ’ ಎಂದು ಹೇಳಿದರು.

ಮಾಜಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ,‘ ಕೊಡವ ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕು. ಆ ನಿಟ್ಟಿನಲ್ಲಿ ಗಮನ ಸೆಳೆಯಬೇಕಿದೆ. ಹಾಗೆಯೇ ಪ್ರಾಥಮಿಕ ಶಾಲಾ ಹಂತದಲ್ಲಿ ಈ ಭಾಷೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಪ್ರಯತ್ನಿಸಬೇಕಿದೆ’ ಎಂದರು.

ಅಕಾಡೆಮಿ ಉಪಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ, ಅಡ್ಡಂಡ ಸಿ.ಕಾರ್ಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.