ADVERTISEMENT

₹6.85 ಲಕ್ಷ ಉಳಿತಾಯ ಬಜೆಟ್

ಕುಶಾಲನಗರ ಪಟ್ಟಣ ಪಂಚಾಯಿತಿಯಿಂದ ₹7.85 ಕೋಟಿ ಆಯವ್ಯಯ ಮಂಡನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:07 IST
Last Updated 1 ಮಾರ್ಚ್ 2018, 11:07 IST

ಕುಶಾಲನಗರ: ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಪಟ್ಟಣದಲ್ಲಿ ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿದೀಪ ವ್ಯವಸ್ಥೆಗಳನ್ನು ಕಲ್ಪಿಸುವುದರೊಂದಿಗೆ ವೈಜ್ಞಾನಿಕವಾಗಿ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿ ಪಟ್ಟಣ ಪಂಚಾಯಿತಿ 2018-–19ನೇ ಸಾಲಿನಲ್ಲಿ ₹7.85 ಕೋಟಿಯ ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಜಗದೀಶ್ ಅವರು ₹6.85 ಲಕ್ಷದ ಉಳಿತಾಯ ಬಜೆಟ್ ಮಂಡಿಸುವ ಮೂಲಕ ಅಭಿವೃದ್ಧಿ ಪರವಾದ ಹಾಗೂ ಈ ಆಡಳಿತಾವಧಿಯ ಕೊನೆಯ ಬಜೆಟ್ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ಪ.ಪಂ.ಆದಾಯದ ಮೂಲಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ಸೇರಿದಂತೆ ವಿವಿಧ ಮೂಲಗಳಿಂದ ₹7.85 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಯೊಂದಿಗೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ₹7.79 ಕೋಟಿ ಖರ್ಚಿನ ಗುರಿ ಹೊಂದಲಾಗಿದೆ.

ADVERTISEMENT

2018-–19ನೇ ಸಾಲಿನಲ್ಲಿ ನಿರೀಕ್ಷಿತ ಆದಾಯ: ಎಸ್.ಎಫ್.ಸಿ. ಅನುದಾನದಿಂದ ₹120 ಲಕ್ಷ, 14ನೇ ಹಣಕಾಸು ಅನುದಾನದ ಮೂಲ ಅನುದಾನದಿಂದ ₹100 ಲಕ್ಷ, ವಿದ್ಯುತ್ ಅನುದಾನ ₹98 ಲಕ್ಷ, ಬರಪರಿಹಾರ ₹20 ಲಕ್ಷ, ವೇತನ ಅನುದಾನ ₹100 ಲಕ್ಷ , ಕಟ್ಟಡ ಪರವಾನಗಿಯಿಂದ ₹15 ಲಕ್ಷ, ಆಸ್ತಿ ತೆರಿಗೆ ₹130 ಲಕ್ಷ, ಉದ್ದಿಮೆ ಪರವಾನಿಗೆ ₹12 ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ₹15.40 ಲಕ್ಷ, ಪರಿಶಿಷ್ಟ ಜಾತಿ, ಪ.ಪಂ.ಪಂಗಡ ಶ್ರೇಯೋಭಿವೃದ್ಧಿಗೆ ₹21.08 ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿ ₹634 ಲಕ್ಷ, ಅಂಗವಿಕಲರಿಗೆ ಶ್ರೇಯೋಭಿವೃದ್ಧಿಗೆ ₹2.65 ಲಕ್ಷ ಹಾಗೂ ಕ್ರೀಡೆಗೆ ಸಹಾಯಧನ ₹88 ಸಾವಿರ ಸೇರಿದಂತೆ ₹7.85 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.

18–19ನೇ ಸಾಲಿನ ನಿರೀಕ್ಷಿತ ಖರ್ಚು ನ ವಿವರ: ವಾಣಿಜ್ಯ ಸಂಕೀಣ ನಿರ್ಮಾಣಕ್ಕಾಗಿ ₹150 ಲಕ್ಷ, ನೌಕರರ ವೇತನಕ್ಕೆ ₹ 98 ಲಕ್ಷ, ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ₹35 ಲಕ್ಷ, ಉದ್ಯಾನ ಅಭಿವೃದ್ಧಿ ಮತ್ತು ಅರಣ್ಯೀಕರಣಕ್ಕಾಗಿ ₹20.50 ಲಕ್ಷ, ದಾರಿದೀಪ ನಿರ್ವಹಣೆ ಮತ್ತು ದುರಸ್ಥಿಗಾಗಿ ₹67.50 ಲಕ್ಷ, ಇತರೆ ನಾಗರಿಕ ಸೌಲಭ್ಯಗಳ ಅಭಿವೃದ್ಧಿಗಾಗಿ ₹30 ಲಕ್ಷ, ನಗರ ಸ್ವಚ್ಛತೆಗಾಗಿ ₹53 ಲಕ್ಷ, ಹೊಸ ಮನೆ ನಿರ್ಮಾಣ ಮತ್ತು ಕಚ್ಚಾದಿಂದ ಪಕ್ಕಾಮನೆ ನಿರ್ಮಾಣಕ್ಕಾಗಿ ₹6 ಲಕ್ಷ ಮೀಸಲಿಡಸಲಾಗಿದೆ.

ಪೌರಕಾರ್ಮಿಕರಿಗೆ ಬೆಳಗಿನ ಉಪಹಾರಕ್ಕಾಗಿ ₹4 ಲಕ್ಷ, ಶೌಚಾಲಯ ನಿರ್ಮಾಣಕ್ಕಾಗಿ ಸಹಾಯ ಧನ ₹2ಲಕ್ಷ, ಪಟ್ಟಣದಲ್ಲಿರುವ ಬಡಜನತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನರ ವೈದ್ಯಕೀಯ ಹಾಗೂ ಅಂತ್ಯಸಂಸ್ಕಾರಕ್ಕಾಗಿ ಮತ್ತು ಕ್ರೀಡೆಗೆ ಸಹಾಯಧನ ₹ 9 ಲಕ್ಷ, ಕಚೇರಿ ಉಪಕರಣಗಳಿಗಾಗಿ ₹6 ಲಕ್ಷ, ರೇಕಾರ್ಡ್ ರೂಂ ಆಧುನೀಕರಣಕ್ಕಾಗಿ ₹3 ಲಕ್ಷ, ಕುಶಾಲನಗರ ಪಟ್ಟಣಕ್ಕೆ 24/7 ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲು ₹ 20 ಲಕ್ಷ ಸೇರಿದಂತೆ ಒಟ್ಟು ₹7.79 ಕೋಟಿ ಖರ್ಚಿನ ಗುರಿ ಹೊಂದಲಾಗಿದೆ.

ಪಟ್ಟಣದ ರಸ್ತೆ, ನೀರು, ಚರಂಡಿ , ನೈರ್ಮಲ್ಯ, ಬೀದಿ ದೀಪ ವ್ಯವಸ್ಥೆಗಳೊಂದಿಗೆ ಸಾರ್ವಜನಿಕ ಆರೋಗ್ಯ, ಬಡತನ ನಿಮೂಲನೆ ಮತ್ತು ಸಮಾಜ ಕಲ್ಯಾಣ ಯೋಜನೆಗಳಿಗೆ ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿಡಲಾಗಿದೆ.

ಬಜೆಟ್ ಉದ್ದೇಶಿಸಿ ಮಾತನಾಡಿದ ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್, ಪಟ್ಟಣದ ಅಭಿವೃದ್ಧಿ ದೃಷ್ಟಿಕೋನ ಇರಿಸಿ ಮಂಡಿಸಿರುವ 2018-–19ನೇ ಸಾಲಿನ ಬಜೆಟ್ ಉತ್ತಮ ಅಭಿವೃದ್ಧಿಪರ ಬಜೆಟ್ ಎಂಬ ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಪ.ಪಂ.ವತಿಯಿಂದ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಬೇಕು ಎಂದರು.

ರೇಕಾರ್ಡ್ ರೂಂ ಆಧುನೀಕರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಎರಡು ಅಂತಸ್ತಿನ ಕಟ್ಟಡಕ್ಕೆ ಸರ್ಕಾರದಿಂದ ಅನುಮತಿ ದೊರೆತ್ತಿದ್ದು, ಸೂಕ್ತ ತೆರಿಗೆ ಪಡೆದು ಕಟ್ಟಡ ಪರವಾನಿಗೆ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ನಾಮನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ ಮಾತನಾಡಿ, ಸರ್ಕಾರದಿಂದ ಪಟ್ಟಣ ಪಂಚಾಯಿತಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಂಡಿದೆ. ಆದರೆ ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅಲ್ಲದೇ ಉಸ್ತುವಾರಿ ಸಚಿವರಿಗೂ ಧನ್ಯವಾದ ಹೇಳುವ ಸೌಜನ್ಯತೆಯನ್ನು ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ತಪ್ಪಾಗಿದೆ ಕೂಡಲೇ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿ ಉಸ್ತುವಾರಿ ಸಚಿರಿಗೂ ಧನ್ಯವಾದ ಅರ್ಪಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಕೆ.ಪಾರ್ವತಿ, ಎಚ್.ಡಿ.ಚಂದ್ರು, ಸದಸ್ಯರಾದ ಎಚ್.ಜೆ ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಡಿ.ಕೆ.ತಿಮ್ಮಪ್ಪ, ಎಚ್.ಎಂ.ಮಧುಸೂದನ್, ರಶ್ಮಿ ಅಮೃತ್ ರಾಜ್ , ಸುರೇಯಾಬಾನು, ಕವಿತಾ, ಲಲಿತಾ, ನಾರ್ಮನಿರ್ದೇಶಿತ ಸದಸ್ಯರಾದ ಫಜಲುಲ್ಲಾ, ಶಿವಶಂಕರ್, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಕಂದಾಯ ಅಧಿಕಾರಿ ಸತೀಶ್, ಕಿರಿಯ ಎಂಜಿನಿಯರ್ ಶ್ರೀದೇವಿ ಉಪಸ್ಥಿತರಿದ್ದರು.
**
3 ಕಡೆ ಸ್ಕೈವಾಕ್‌

ಪಟ್ಟಣದಲ್ಲಿ ರಸ್ತೆ ದಾಟಲು ಅವಶ್ಯಕವಿರುವ 3 ಕಡೆ ಸ್ಕೈವಾಕ್ ನಿರ್ಮಾಣಕ್ಕಾಗಿ ₹20 ಲಕ್ಷ, ಸಾರ್ವಜನಿಕ ಈಜುಕೊಳ ನಿರ್ಮಾಣಕ್ಕಾಗಿ ₹20, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಯ ವಾಹನ ಖರೀದಿ ಮತ್ತು ಯಂತ್ರೋಪಕರಣಗಳಿಗಾಗಿ( ಮಹಿಳೆಯರ ಅನುಕೂಲಕ್ಕಾಗಿ ವಿಶೇಷವಾಗಿ ನ್ಯಾಪ್ಕಿನ್ ಬರ್ನಿಂಗ್ ಮಿಷನ್ ಖರೀದಿ) ₹26 ಲಕ್ಷ ಹಾಗೂ ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ವ್ಯವಸ್ಥೆಯಾಗಿ ₹3 ಲಕ್ಷ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.