ADVERTISEMENT

ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ಕೊಡಗಿನ ತಲಕಾವೇರಿಯಲ್ಲಿ ಈ ಬಾರಿ ಬಿಸಿಲು ನೆರಳಿನಾಟ

ಕೆ.ಎಸ್.ಗಿರೀಶ್
Published 17 ಅಕ್ಟೋಬರ್ 2025, 22:11 IST
Last Updated 17 ಅಕ್ಟೋಬರ್ 2025, 22:11 IST
<div class="paragraphs"><p>ತಲಕಾವೇರಿಯಲ್ಲಿ ಶುಕ್ರವಾರ ಕಾವೇರಿ ಪವಿತ್ರ ತೀರ್ಥೋದ್ಭವ ಆಯಿತೆಂದು ಅರ್ಚಕ ವೃಂದ ಘೋಷಿಸುತ್ತಿದ್ದಂತೆ ತೀರ್ಥವನ್ನು ಪಡೆಯಲು ಭಕ್ತರು ಮುಗಿಬಿದ್ದರು&nbsp;</p></div>

ತಲಕಾವೇರಿಯಲ್ಲಿ ಶುಕ್ರವಾರ ಕಾವೇರಿ ಪವಿತ್ರ ತೀರ್ಥೋದ್ಭವ ಆಯಿತೆಂದು ಅರ್ಚಕ ವೃಂದ ಘೋಷಿಸುತ್ತಿದ್ದಂತೆ ತೀರ್ಥವನ್ನು ಪಡೆಯಲು ಭಕ್ತರು ಮುಗಿಬಿದ್ದರು 

   

 ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಮಡಿಕೇರಿ: ಹಸಿರುಹೊದ್ದ ಬೆಟ್ಟಗಳ ನಡುವೆ ಕಾವೇರಿ ಪವಿತ್ರ ತೀರ್ಥೋದ್ಭವವು ಮುಂಜಾನೆಯ ಚಳಿ ಹಾಗೂ ದಟ್ಟ ಮಂಜಿನ ಬದಲು ಅಪರೂಪಕ್ಕೆಂಬಂತೆ ಈ ಬಾರಿ ಮಧ್ಯಾಹ್ನದ ಬಿಸಿಲು–ನೆರಳಿನಾಟದಲ್ಲಿ
ಒಡಮೂಡಿತು. ಈ ವಿಶೇಷ ಕ್ಷಣ ಕಣ್ತುಂಬಿಕೊಳ್ಳಲೆಂದೇ ಮೋಡಗಳ ನಡುವಿನಿಂದ ಸೂರ್ಯ ಆಗಾಗ ಇಣುಕುತ್ತಿದ್ದ.

ADVERTISEMENT

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅರ್ಚಕ ವೃಂದ ಶುಕ್ರವಾರ ಮಧ್ಯಾಹ್ನ 1.44ಕ್ಕೆ ಕಾವೇರಿ
ಪವಿತ್ರ ತೀರ್ಥೋದ್ಭವಾಯಿತೆಂದು ಘೋಷಿಸುತ್ತಿದ್ದಂತೆಯೇ ಸುತ್ತಲೂ ಸೇರಿದ್ದ ಅಪಾರ ಜನರು ಜಯಘೋಷ ಮೊಳಗಿಸಿತು. ಪವಿತ್ರ ಜಲವನ್ನು ಅರ್ಚಕರು ಪ್ರೋಕ್ಷಿಸುತ್ತಿದ್ದಂತೆಯೇ ಪುಳಕಿತ ರಾದ ಜನರು ಕೈಮುಗಿದರು. ‘ಉಕ್ಕಿ ಬಾ ಕಾವೇರಮ್ಮೆ, ಕುಲದೇವಿ ಕಾವೇರಮ್ಮೆ’ ಎಂದು ಜಯಘೋಷಗಳನ್ನು ಮೊಳಗಿಸಿದರು.

ಆಗೊಮ್ಮೆ, ಈಗೊಮ್ಮೆ ಆವರಿಸುತ್ತಿದ್ದ ದಟ್ಟ ಮೋಡಗಳು ಸೂರ್ಯನ ಉರಿಬಿಸಿಲಿಂದ ಜನರನ್ನು ಬಸವಳಿಯದಂತೆ ನೋಡಿಕೊಂಡವು. ಮಳೆಗಾಗಿ ತಂದಿದ್ದ ಕೊಡೆಗಳನ್ನು ಜನರು ಬಿಸಿಲಿಗೆ ಹಿಡಿದು ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಂಡರು. ಈ ಬಾರಿ ತೀರ್ಥೋದ್ಭವ ಮಧ್ಯಾಹ್ನ ನಡೆದಿದ್ದರಿಂದ ಎಲ್ಲಾ ವಯೋಮಾನದವರೂ ಭಾಗಿಯಾದರು.

ತೀರ್ಥೋದ್ಭವದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಶುಭ್ರವಾಗಿದ್ದ ಕಲ್ಯಾಣಿಯಲ್ಲಿ ಮುಳುಗೆದ್ದರು. ತೀರ್ಥ ತುಂಬಿಸಿಕೊಳ್ಳಲು ಒಮ್ಮೆಗೆ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. 

ಇದಕ್ಕೂ ಮುನ್ನ ಹೆಚ್ಚಿನ ಜನರು ಭಾಗಮಂಡಲದಿಂದ ತಲಕಾವೇರಿ ಬೆಟ್ಟವನ್ನು ಸಾಂಪ್ರದಾಯಿಕ ದಿರಿಸು ತೊಟ್ಟು ಕಾಲ್ನಡಿಗೆಯಲ್ಲಿ ಏರಿ ಧನ್ಯತೆ ಅನುಭವಿಸಿದರು. ಹಾಳಾಗಿದ್ದ ರಸ್ತೆಯಲ್ಲೇ ಈ ವರ್ಷವೂ ಮಡಿಕೇರಿಯಿಂದ ಭಾಗಮಂಡಲ ದವರೆಗೂ ಪ್ರಯಾಣಿಸಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಕಾಲ್ನಡಿಗೆಯಲ್ಲಿ ತಲಕಾವೇರಿ ಬೆಟ್ಟ ಏರಿ ಗಮನ ಸೆಳೆದರು. ಹವಾಮಾನ ವೈಪರೀತ್ಯ ಕಾರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಮಲಿಂಗಾರೆಡ್ಡಿ ತಮ್ಮ ಭೇಟಿಯನ್ನು ಕಡೆ ಗಳಿಗೆಯಲ್ಲಿ ರದ್ದುಪಡಿಸಿದರು.

ತಲಕಾವೇರಿಯಲ್ಲಿ ಶುಕ್ರವಾರ ಕಾವೇರಿ ಪವಿತ್ರ ತೀರ್ಥೋದ್ಭವವಾಯಿತೆಂದು ಅರ್ಚಕ ವೃಂದ ಘೋಷಿಸುತ್ತಿದ್ದಂತೆಯೇ ತೀರ್ಥವನ್ನು ಪಡೆಯಲು ಭಕ್ತರು ಮುಗಿಬಿದ್ದರು   

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಶುಕ್ರವಾರ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೂ ಮುನ್ನ ಅರ್ಚಕ ವೃಂದ ಬ್ರಹ್ಮಕುಂಡಿಕೆಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿದರು

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವ ಸಂಭವಿಸಿದಾಗ ಅಪಾರ ಭಕ್ತವೃಂದ ತೀರ್ಥ ಪಡೆಯಲು ಮುಗಿಬಿದ್ದರು

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಶುಕ್ರವಾರ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೂ ಮುನ್ನ ಅರ್ಚಕ ವೃಂದ ಬ್ರಹ್ಮಕುಂಡಿಕೆಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.