ADVERTISEMENT

ಅಬ್ಬಿ ಜಲಪಾತದ ಬಳಿ ಒಂದು ವಾಹನ ಭರ್ತಿ ಕಸ ಸಂಗ್ರಹ

ಸುರಿಯುತ್ತಿದ್ದ ಮಳೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ‘ಬೃಹತ್ ಸ್ವಚ್ಛತಾ ಆಂದೋಲನ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 17:19 IST
Last Updated 1 ಅಕ್ಟೋಬರ್ 2023, 17:19 IST
‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಬ್ಬಿ ಜಲಪಾತದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಭಾನುವಾರ ಸಂಗ್ರಹಿಸಿದರು
‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಬ್ಬಿ ಜಲಪಾತದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಭಾನುವಾರ ಸಂಗ್ರಹಿಸಿದರು   

ಮಡಿಕೇರಿ: ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಇಲ್ಲಿನ ಅಬ್ಬಿ ಜಲಪಾತದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಸ್ವಚ್ಛ ಭಾರತ ಮಿಷನ್‌ ಗ್ರಾಮಾಂತರದ ವತಿಯಿಂದ ಭಾನುವಾರ ನಡೆದ ಜಿಲ್ಲಾಮಟ್ಟದ ಬೃಹತ್ ಸ್ವಚ್ಛತಾ ಆಂದೋಲನದಲ್ಲಿ ಭಾರಿ ಪ್ರಮಾಣದ ಕಸ ಸಂಗ್ರಹವಾಯಿತು.

ಸುರಿಯುತ್ತಿದ್ದ ಮಳೆ ನಡುವೆಯೇ ಕೊಡೆ ಹಿಡಿದ 50ಕ್ಕೂ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವು ಕೇವಲ ಒಂದು ಗಂಟೆ ಅವಧಿಯಲ್ಲಿ ಅಬ್ಬಿ ಜಲಪಾತದ ವಾಹನ ನಿಲುಗಡೆ ಪ್ರದೇಶ, ರಸ್ತೆಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಬರೋಬರಿ ಸ್ವಚ್ಛತಾ ವಾಹಿನಿಯ ಒಂದು ವಾಹನ ಭರ್ತಿಯಾಗುವಷ್ಟು ಕಸ ಸಂಗ್ರಹಗೊಂಡಿತು.

ಇಲ್ಲಿ ಸಂಗ್ರಹಗೊಂಡ ಕಸದಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳೇ ಅತ್ಯಂತ ಹೆಚ್ಚು ಇದ್ದವು. ಪ್ರವಾಸಿಗರು ಉದಾಸೀನದಿಂದ ನೀರು ಕುಡಿದು ಎಲ್ಲೆಂದರಲ್ಲಿ ಬಾಟಲಿ ಎಸೆದು ಹೋಗಿರುವ ದೃಶ್ಯಗಳು ಹೆಚ್ಚಾಗಿ ಕಂಡು ಬಂದವು.

ADVERTISEMENT

 ಈ ವೇಳೆ ಮಾತನಾಡಿದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ‘ನಮ್ಮ‌ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು‌ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ. ನಮ್ಮ ಬದುಕಿನಲ್ಲಿ‌ ಸ್ವಚ್ಛತೆ ಬಹು ಮುಖ್ಯವಾಗಿದೆ. ನಮ್ಮ ಮನೆ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪರಿಸರದಲ್ಲಿಯೂ ನಾವು ಸ್ವಚ್ಛತೆಯನ್ನು‌ ಕಾಪಾಡಬೇಕು. ಇದರಿಂದ ಉತ್ತಮ ಆರೋಗ್ಯದ ಜೊತೆಗೆ ನಮ್ಮ ಪರಿಸರವೂ ಸಹ ಸುಂದರವಾಗಿರುತ್ತದೆ’ ಎಂದರು. 

ಪ್ರಧಾನಮಂತ್ರಿ ಅವರ ಆಶಯದಂತೆ ದೇಶಾದ್ಯಂತ ಅಕ್ಟೋಬರ್ 1ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ವರೆಗೆ ಒಂದು‌ ಗಂಟೆಗಳ ಕಾಲ ಶ್ರಮದಾನ ಮಾಡಲಾಗಿದೆ. ಇದರ ಅಂಗವಾಗಿ ಅಬ್ಬಿ ಜಲಪಾತದ ಬಳಿ ಜಿಲ್ಲಾ ಮಟ್ಟದಲ್ಲಿ ‘ಬೃಹತ್ ಸ್ವಚ್ಛತಾ ಆಂದೋಲನ’ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಲ್ಲಿಯೂ ಏಕ ಕಾಲದಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿದೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಿ.ಧನರಾಜು ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 1 ಗಂಟೆಗಳ ಕಾಲ ಶ್ರಮದಾನ ಮಾಡಿ ಜನಸಾಮಾನ್ಯರಲ್ಲಿ ಮತ್ತು ಪ್ರವಾಸಿಗರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಗಿದೆ.  ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರೂ ಸಹ ಪ್ಲಾಸ್ಟಿಕ್ ಬಾಟಲಿ, ಮುಂತಾದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಈಗಾಗಲೇ ಇರಿಸಿರುವ ಕಸದಬುಟ್ಟಿಯಲ್ಲಿಯೇ ಹಾಕಬೇಕು’ ಎಂದು ತಿಳಿಸಿದರು.

ಮಡಿಕೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಅವರು, ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಜನ ಜಾಗೃತಿ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಒಂದು ಗಂಟೆಗಳ ಕಾಲ ನಡೆದ ಶ್ರಮದಾನದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು.

ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮತ್ತು ಸದಸ್ಯರು, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ಇದ್ದರು.

‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಬ್ಬಿ ಜಲಪಾತದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಭಾನುವಾರ ಸಂಗ್ರಹಿಸಿದರು
‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಬ್ಬಿ ಜಲಪಾತದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಭಾನುವಾರ ಸಂಗ್ರಹಿಸಿದರು
‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಬ್ಬಿ ಜಲಪಾತದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಭಾನುವಾರ ಸಂಗ್ರಹಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು

ಸ್ವಚ್ಛತೆ ಕಾಪಾಡದ ಅಂಗಡಿಗಳ ಟೆಂಡರ್‌ ರದ್ದು; ಎಚ್ಚರಿಕೆ ‘ಅಂಗಡಿ ಮಾಲೀಕರು ಜವಾಬ್ದಾರಿಯುತವಾಗಿ ಕಸವನ್ನು ಸಂಗ್ರಹಿಸಿ ಸ್ವಚ್ಛತೆಯನ್ನು ಕಾಪಾಡಬೇಕು.  ಯಾವುದೇ ಅಂಗಡಿಗಳ ಮಾಲೀಕರು ಸ್ವಚ್ಛತೆ ಕಾಪಾಡದೆ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡಿದಲ್ಲಿ ಅಂತಹವರ ಟೆಂಡರನ್ನು ರದ್ದು ಪಡಿಸಲಾಗುವುದು’ ಎಂದೂ ಅವರು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.