ಮಡಿಕೇರಿ: ಬಾಳೆಗುಂಡಿ, ವಾಲ್ನೂರು ತ್ಯಾಗತ್ತೂರು ಸೇರಿದಂತೆ ವಿವಿಧ ಹಾಡಿಗಳಲ್ಲಿ ವಾಸಿಸುವ ಪರಿಶಿಷ್ಟ ವರ್ಗದ ಹಲವು ಕುಟುಂಬಗಳಿಗೆ ಆಧಾರ್ ಕಾರ್ಡ್ ಇನ್ನೂ ಸಿಕ್ಕಿಲ್ಲ ಎಂಬ ವಿಷಯ ಇಲ್ಲಿ ಮಂಗಳವಾರ ನಡೆದ ಅನುಸೂಚಿತ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಯಿತು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಈ ಸಭೆಯಲ್ಲಿ ಸಮಿತಿ ಸದಸ್ಯರಾದ ಪಿ.ಪಿ.ಸುಕುಮಾರ್ ಹಾಗೂ ಜಾಯ್ಸ್ ಮೆನೇಜಸ್ ಅವರು ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದರು.
ಬಾಳೆಗುಂಡಿ ವಾಲ್ನೂರು ತ್ಯಾಗತ್ತೂರು ವಿವಿಧ ಹಾಡಿಗಳಲ್ಲಿ ವಾಸಿಸುವ ಪರಿಶಿಷ್ಟ ವರ್ಗದ ಸುಮಾರು 40 ಮಂದಿಗೆ ಆಧಾರ್ ಕಾರ್ಡ್ ಇಲ್ಲ. ಇಂದಿನ ಆಧುನಿಕ ಯುಗದಲ್ಲೂ ಕೊಡಗು ಜಿಲ್ಲೆಯಲ್ಲಿ ಈ ಸ್ಥಿತಿ ಇದೆ ಎಂದು ಸುಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಜಾಯ್ಸ್ ಮೆನೇಜಸ್ ಅವರು ಮಾತನಾಡಿ, ‘ಆಧಾರ್ ಕಾಡ್ ಇಲ್ಲದೇ ಇರುವುದರಿಂದ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಆಧಾರ್ ಇಲ್ಲದ ಕುಟುಂಬಗಳನ್ನು ಗುರುತಿಸಿ ಆಧಾರ್ ಕಾರ್ಡ್ ಮಾಡಿಸಬೇಕು’ ಎಂದು ಒತ್ತಾಯಿಸಿದರು.
ಆಧಾರ್ ಕಾರ್ಡ್ ಇಲ್ಲದವರನ್ನು ಜಿಲ್ಲಾಡಳಿತ ಭವನದಲ್ಲಿರುವ ಆಧಾರ್ ಕೇಂದ್ರಕ್ಕೆ ಕರೆ ತಂದು ಆಧಾರ್ ಕಾರ್ಡ್ ಮಾಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧಿಕಾರಿಗಳಿಗೆ ಸೂಚಿಸಿದರು.
ಶಾಶ್ವತ ನೆಲೆ ಕಲ್ಪಿಸಿ: ಸಮಿತಿ ಸದಸ್ಯ ಎಚ್.ಎಸ್.ಮುತ್ತಪ್ಪ ಮಾತನಾಡಿ, ‘ಹೊದ್ದೂರು, ಹೊದವಾಡ ಸೇರಿದಂತೆ ಕಾವೇರಿ ನದಿ ಪಾತ್ರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶಿಷ್ಟರು ವಾಸ ಮಾಡುತ್ತಿದ್ದು, ಇವರಿಗೆ ಶಾಶ್ವತ ನೆಲೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ನಿವೇಶನ ಕಲ್ಪಿಸುವುದರ ಜೊತೆಗೆ ಮನೆ ನಿರ್ಮಿಸಿಕೊಡಬೇಕು ಎಂದೂ ಅವರು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ‘ಹೊದ್ದೂರು-ಹೊದವಾಡ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಜನಾರ್ಧನ ಮಾತನಾಡಿ, ‘ಕೊಡ್ಲಿಪೇಟೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೆ ಅಲ್ಲಿನ ಸಾರ್ವಜನಿಕರು ಪ್ರತೀನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಗಮನ ಸೆಳೆದರು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಬೇಕು ಎಂದರು ಕೋರಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ವೈದ್ಯರ ಕೊರತೆ ಎಲ್ಲೆಡೆ ಇದ್ದು, ವೈದ್ಯರ ನಿಯೋಜನೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಸಮಿತಿ ಸದಸ್ಯರಾದ ಪರಮೇಶ್, ವಿಜಯಕುಮಾರ್, ಪುಟ್ಟಮ್ಮ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ತಾ.ಪಂ.ಇಒಗಳಾದ ಅಪ್ಪಣ್ಣ, ಪರಮೇಶ, ಪುರಸಭೆ ಮುಖ್ಯಾಧಿಕಾರಿಗಳಾದ ಗಿರೀಶ್, ನಾಚಪ್ಪ, ಸತೀಶ್ ಭಾಗವಹಿಸಿದ್ದರು.
ಪೌರಕಾರ್ಮಿಕರಿಗೆ ಸ್ವಂತ ನಿವೇಶನ ಕೊಡಿ
ಸಫಾಯಿ ಕರ್ಮಚಾರಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ರಂಗಸ್ವಾಮಿ ಮಾತನಾಡಿ ಸುಂಟಿಕೊಪ್ಪ ಹೋಬಳಿ ಕೇಂದ್ರದಲ್ಲಿ ಪೌರಕಾರ್ಮಿಕರಿಗೆ ಸ್ವಂತ ನಿವೇಶನ ಇಲ್ಲದೆ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದು ಇವರಿಗೆ ಜಾಗ ಕಾಯ್ದಿರಿಸಿ ಮನೆ ನಿರ್ಮಿಸಿಕೊಡಬೇಕು ಎಂದು ಕೋರಿದರು.
ಪೌರಕಾರ್ಮಿಕರ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಆಯೋಜಿಸಬೇಕು. ಉನ್ನತ ವ್ಯಾಸಂಗ ಮಾಡಿದ ಪೌರಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ನೇರ ಸಾಲ ಯೋಜನೆಯಡಿ ಸಹಾಯಧನ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸುಂಟಿಕೊಪ್ಪದಲ್ಲಿ ಸರ್ಕಾರಿ ಭೂಮಿ ಸಿಗುವುದು ಕಷ್ಟಸಾಧ್ಯವಾಗಿದೆ. ಹತ್ತಿರದಲ್ಲಿ ಪೈಸಾರಿ ಜಾಗ ಇದ್ದಲ್ಲಿ ಗುರುತಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಪರಿಶಿಷ್ಟರಿಗಾಗಿ ಸರ್ಕಾರದಿಂದ ಹಲವು ಸೌಲಭ್ಯಗಳಿದ್ದು ಅವುಗಳನ್ನು ತಲುಪಿಸಬೇಕು. ಸರ್ಕಾರದಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅರ್ಹರಿಗೆ ಸವಲತ್ತು ತಲುಪಿಸಬೇಕು ಎಂದು ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಹಲವು ಕೆಲಸಗಳು ಬಾಕಿ ಇದ್ದು ಕೂಡಲೇ ಪೂರ್ಣಗೊಳಿಸಬೇಕಿದೆ-ಜೆ.ಎಲ್.ಜನಾರ್ಧನ ಸಮಿತಿ ಸದಸ್ಯ
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೊನಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಲವು ಕಾಮಗಾರಿ ನಡೆದಿದ್ದು ಬಿಲ್ಲುಗಳ ಪಾವತಿಗೆ ಬಾಕಿ ಇದೆ- ಎಚ್.ಎಸ್.ಮುತ್ತಪ್ಪ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.