ಮಡಿಕೇರಿ: ಪಡುವಣದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ತೋಟದಲ್ಲಿ ಕೆಲಸ ಮಾಡಿ ಬಸವಳಿದ ಶ್ರಮಿಕ ವರ್ಗ ಕೂರುವುದು ರೇಡಿಯೊ ಮುಂದೆ. ವಿದ್ಯುತ್ ಇರಲಿ, ಬಿಡಲಿ. ಇವರ ಮನರಂಜನೆಗೆ ಒಂದಿಷ್ಟೂ ಭಂಗ ಉಂಟಾಗದು. ಮಳೆಗಾಲದಲ್ಲಂತೂ ವಾರಗಟ್ಟಲೆ ವಿದ್ಯುತ್ ಇಲ್ಲದಿರುವ ಹೊತ್ತಿನಲ್ಲೂ ಬೇಸರ ಕಳೆಯುವುದಕ್ಕೆ ಮಾತ್ರವಲ್ಲ ಮಾಹಿತಿ ಪಡೆಯುವುದಕ್ಕೆ ಇರುವುದು ಇದೇ ರೇಡಿಯೊ. ಸಾವಿರಾರು ಸಂಖ್ಯೆಯಲ್ಲಿರುವ ಈ ಶ್ರಮಿಕ ವರ್ಗದವರಿಂದಲೇ ರೇಡಿಯೊ ಇಂದು ಕೊಡಗಿನಲ್ಲಿ ಜೀವಂತವಾಗಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರೇಡಿಯೊ ಕೇಳುಗರು ಕೊಡಗಿನಲ್ಲಿ ಅಧಿಕ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಆದಾಯ ಇರುವುದೂ ನಮ್ಮ ಮಡಿಕೇರಿ ಆಕಾಶವಾಣಿ ಕೇಂದ್ರಕ್ಕೆ. ಮಾತ್ರವಲ್ಲ, ಹೊರರಾಜ್ಯದಿಂದಲೂ ಜಾಹೀರಾತು ಪಡೆಯುತ್ತಿರುವ, ಬೇರೆ ಆಕಾಶವಾಣಿ ಕೇಂದ್ರಗಳಿಲ್ಲದ ಅಪರೂಪದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವ ಮೂಲಕ ಮಡಿಕೇರಿ ಆಕಾಶವಾಣಿ ಅಪಾರ ಜನಮನ್ನಣೆ ಗಳಿಸಿದೆ.
ಕೇರಳದ ಕಾಸರಗೋಡು, ಕಣ್ಣೂರು, ಇರಿಟ್ಟಿ, ಟಾವರ್‌ಕರ, ವೈನಾಡು ಸೇರಿದಂತೆ ಅನೇಕ ಪ್ರದೇಶಗಳಿಗೆ ಮಡಿಕೇರಿ ಆಕಾಶವಾಣಿ ಪ್ರಸಾರ ತಲುಪುತ್ತಿದ್ದು, ಅಲ್ಲಿಂದಲೂ ಕೇಂದ್ರಕ್ಕೆ ಜಾಹೀರಾತುಗಳು ಬರುತ್ತಿವೆ.
ಕಾಫಿಮಂಡಳಿಯ ಕಾಫಿ ಬುಲೆಟಿನ್, ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯ ಮಾಹಿತಿಗಳೂ ಸೇರಿದಂತೆ ಕೊಡಗಿನ ಪರಿಸರಕ್ಕೆ ಅತ್ಯಗತ್ಯವಾಗಿ ಬೇಕಾದ ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಮಡಿಕೇರಿ ಆಕಾಶವಾಣಿ ಕೇಂದ್ರ ಪಾತ್ರವಾಗಿದೆ.
ಇಂದಿಗೂ ಹೆಚ್ಚಿನ ಜನರನ್ನು ತಲುಪುವ ಕಾರಣದಿಂದಲೇ ಸರ್ಕಾರದ ವಿವಿಧ ಇಲಾಖೆಗಳು ತಮ್ಮಲ್ಲಿರುವ ಸೇವಾ ಮಾಹಿತಿಯನ್ನು ಆಕಾಶವಾಣಿಗೆ ನೀಡುತ್ತಿವೆ. ಈಗ ಆನ್‌ಲೈನ್‌ನಲ್ಲೂ ಪ್ರಸಾರವಾಗುವುದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿ ಕೂತರೂ ಮಡಿಕೇರಿ ಆಕಾಶವಾಣಿಗೆ ಕಿವಿಗೊಡುವ ಅವಕಾಶ ಇದೆ.
ಮುಖ್ಯವಾದ ಕಾರ್ಯಕ್ರಮಗಳನ್ನು ಕೇಳುವುದು ಮರೆತುಹೋದರೂ ಅಥವಾ ಕಾರಣಾಂತರಗಳಿಂದ ಸಾಧ್ಯವಾಗದೇ ಹೋದರೂ ಚಿಂತಿಸಬೇಕಿಲ್ಲ. ಮಡಿಕೇರಿ ಆಕಾಶವಾಣಿಯ ಯೂಟ್ಯೂಬ್‌ನಲ್ಲಿ ಅದರ ಮುದ್ರಿತ ಪ್ರಸಾರ ಇರುತ್ತದೆ.
ಪ್ರಾಕೃತಿಕ ವಿಕೋಪದ ವೇಳೆ ಅತ್ಯಗತ್ಯ
ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ರೇಡಿಯೊ ಎಲ್ಲರಿಗೂ ಬೇಕಾಗುತ್ತದೆ. ಮರಗಳು ಬಿದ್ದು, ಗುಡ್ಡಗಳು ಕುಸಿದು, ಸಂಚಾರ ಬಂದ್ ಆಗಿ, ಇಂಟರ್‌ನೆಟ್, ವಿದ್ಯುತ್ ಸ್ಥಗಿತಗೊಂಡಾಗ ಜಗತ್ತಿನ ವಿದ್ಯಮಾನಗಳನ್ನು ತಿಳಿಸುವುದು ಇದೇ ರೇಡಿಯೊ. 2018 ಮತ್ತು 2019ರ ಭೂಕುಸಿತದಂತಹ ಕರಾಳ ದಿನಗಳಲ್ಲಿ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ ಹಾಗೂ ಅವರೊಂದಿಗೆ ಸಿಬ್ಬಂದಿ ಹಗಲು ರಾತ್ರಿ ಕಾರ್ಯನಿರ್ವಹಿಸಿ, ನಿರಂತರವಾಗಿ ಸುದ್ದಿ ಮುಟ್ಟಿಸಿದರು. ಮಾತ್ರವಲ್ಲ, ಸಂಕಷ್ಟಕ್ಕೀಡಾಗಿದ್ದ ಜನರ ಕಷ್ಟವನ್ನು ಕೇಳಿ ಅದನ್ನು ಸಂಘ, ಸಂಸ್ಥೆಗಳಿಗೆ, ಸರ್ಕಾರಕ್ಕೆ ತಲುಪಿಸುವ ಸೇತುವೆಯಂತೆ ಆಕಾಶವಾಣಿ ಕಾರ್ಯನಿರ್ವಹಿಸಿದ್ದನ್ನು ಬಹುತೇಕ ಮಂದಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇನ್ನು ದೇಶದ ಬೇರೆ ಆಕಾಶವಾಣಿ ಕೇಂದ್ರಗಳು ಅನುಭವಿಸುತ್ತಿರುವಂತಹ ಸಮಸ್ಯೆಗಳಿಂದ ಮಡಿಕೇರಿ ಆಕಾಶವಾಣಿ ಕೇಂದ್ರವೂ ಹೊರತಾಗಿಲ್ಲ. ಸಿಬ್ಬಂದಿ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ನಿವೃತ್ತರಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ನೇಮಕಾತಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. ಸದ್ಯ, ಇಲ್ಲೂ ಕಾಯಂ ಸಿಬ್ಬಂದಿಗಳ ಸಂಖ್ಯೆ ಬೆರಳೆಣಿಕೆ. ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆಯೂ ಅತ್ಯಲ್ಪ. ಕೊರತೆಗಳ ಮಧ್ಯೆಯೂ ಆಕಾಶವಾಣಿ ಎಲ್ಲರನ್ನೂ ತಲುಪುತ್ತಿರುವುದು ಅದರ ಹೆಗ್ಗಳಿಕೆ ಎನಿಸಿದೆ.
ಸಂತೆಗಳಲ್ಲಿ ಭರ್ಜರಿ ವ್ಯಾಪಾರ
ಇಂದಿಗೂ ಸಂತೆಗಳಲ್ಲಿ ರೇಡಿಯೊಗಳ ಭರ್ಜರಿ ವ್ಯಾಪಾರ ನಡೆಯುತ್ತದೆ. ಹೆಚ್ಚಾಗಿ ತೋಟದಲ್ಲಿ ಕೆಲಸ ಮಾಡುವ ದುಡಿಯುವ ವರ್ಗವೇ ಇದರ ಗ್ರಾಹಕರು. ಜೇಬಿನಲ್ಲಿಟ್ಟುಕೊಳ್ಳುವ ಗಾತ್ರದಿಂದ ಹಿಡಿದು ಸಾಮಾನ್ಯ ಗಾತ್ರದವರೆಗೂ ಬೇರೆ ಬೇರೆ ವಿನ್ಯಾಸದಲ್ಲಿ ರೇಡಿಯೊಗಳು ಸಂತೆಗಳಲ್ಲಿ ಕೈಗೆಟುಕುವ ದರದಲ್ಲಿ ಸಿಗುತ್ತಿವೆ.
ನಿಧನವಾರ್ತೆಯೂ ಲಭ್ಯ
ನಿಧನವಾರ್ತೆಯನ್ನು ವಾಚಿಸುವ ದೇಶದ ಅಪರೂಪದ ಕೇಂದ್ರಗಳಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರವೂ ಒಂದು. ಬೆಳಿಗ್ಗೆ 7 ಗಂಟೆ 7.45 ಸಂಜೆ 7.20ಕ್ಕೆ ನಿಗದಿತವಾಗಿ ನಿಧನವಾರ್ತೆ ಪ್ರಸಾರವಾಗುತ್ತಿದೆ. ಮಧ್ಯದಲ್ಲಿ ಕೇಳುಗರಿಂದ ಬೇಡಿಕೆ ಬಂದಲ್ಲಿ ಆಗಲೂ ನಿಧನವಾರ್ತೆಯನ್ನು ಪ್ರಸಾರ ಮಾಡಲಾಗುತ್ತದೆ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ ಎಂದು ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಪಿ.ಎಂ.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಲ್ಲ ಸಮೂಹ ಮಾಧ್ಯಮಗಳು ಅಂತರ್ಜಾಲ ಮಾಧ್ಯಮಗಳ ನಡುವೆ ಮಡಿಕೇರಿ ಆಕಾಶವಾಣಿ ಕೇಂದ್ರವು ತನ್ನದೇ ಅಸ್ತಿತ್ವವನ್ನು ಪ್ರಬಲವಾಗಿ ಉಳಿಸಿಕೊಂಡಿದೆ. ಇದು ಕೊಡಗಿನ ಅಸ್ಮಿತೆಯೂ ಆಗಿದೆ.–ಪಿ.ಎಂ.ಜಗದೀಶ್, ಕಾರ್ಯಕ್ರಮ ಮುಖ್ಯಸ್ಥ ಮಡಿಕೇರಿ ಆಕಾಶವಾಣಿ.
6 ಭಾಷೆಗಳಲ್ಲಿ ಸುದ್ದಿ ಪ್ರಸಾರ!
ಬೇರೆಲ್ಲ ಆಕಾಶವಾಣಿ ಕೇಂದ್ರಗಳಲ್ಲಿ 3–4 ಭಾಷೆಯಲ್ಲಿ ವಾರ್ತಾ ಪ್ರಸಾರವಿದ್ದರೆ ಮಡಿಕೇರಿ ಆಕಾಶವಾಣಿಯ ಮೂಲಕ ಒಟ್ಟು 6 ಭಾಷೆಗಳಲ್ಲಿ ವಾರ್ತಾ ಪ್ರಸಾರ ಕೇಳಬಹುದು. ಕನ್ನಡ ಹಿಂದಿ ಇಂಗ್ಲಿಷ್ ಸಂಸ್ಕೃತ ಜೊತೆಗೆ ಕೊಡವ ಮತ್ತು ಅರೆಭಾಷೆಯಲ್ಲಿಯೂ ಸುದ್ದಿ ಪ್ರಸಾರ ನಡೆಯುತ್ತಿದೆ. ಇದಕ್ಕೆ ಹೆಚ್ಚಿನ ಕೇಳುಗರಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.