ನಾಪೋಕ್ಲು: ಮಳೆಗಾಲದ ನಡು ಅವಧಿ ಎಂದರೆ ಧೋ ಎಂದು ಭೋರ್ಗರೆದು ಸುರಿದು ಬಿಡುವು ಕೊಡುವ ದಿನಗಳು. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಟಿ ತಿಂಗಳಿನಲ್ಲಿ ಆಟಿ 18 ರ ದಿನವನ್ನು ಆಯುರ್ವೇದ ಸಂಬಂಧದ ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಇದನ್ನು ‘ಕಕ್ಕಡ ಪದಿನೆಟ್’ ಎಂತಲೂ ಕರೆಯುತ್ತಾರೆ.
ಇದೇ ಶನಿವಾರ ಆ. 3ರಂದು ಜಿಲ್ಲೆಯಾದ್ಯಂತ ಆಟಿ ಸಂಭ್ರಮ ಮನೆ ಮಾಡುತ್ತದೆ. ಆಟಿ 18 ಹಬ್ಬದ ಆಚರಣೆಯೆಂದರೆ ಅದು ಆಟಿಸೊಪ್ಪಿನ ಬಳಕೆಯ ಹಬ್ಬ. ಆಟಿ ತಿಂಗಳ 18ನೇ ದಿನಕ್ಕೆ ಆಟಿ ಸೊಪ್ಪಿನಲ್ಲಿ (ಮಧುಬನ) 18 ಔಷಧೀಯ ಗುಣಗಳು ಸೇರಲಿದ್ದು, ಅದನ್ನು ಹಬ್ಬದಂದು ವಿಶೇಷವಾಗಿ ಬಳಸಲಾಗುತ್ತದೆ.
ಆಟಿ ತಿಂಗಳಲ್ಲಿ ಶರೀರ ಶೀತದಿಂದ ಕೂಡಿರುತ್ತದೆ. ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಣಿಲೆ, ಕೆಸ, ಇನ್ನಿತರ ಉಷ್ಣಾಂಶ ಹೆಚ್ಚಿಸುವ ವಸ್ತುಗಳ ಸೇವನೆಯನ್ನು ಹಿರಿಯರು ಹಿಂದಿನಿಂದ ಮಾಡುತ್ತಾ ಬಂದಿದ್ದಾರೆ. ದಿನದ ಮಹತ್ವ ಸಾರುವ ಆಟಿ 18 ನ್ನು ಈಚೆಗೆ ವಿವಿಧ ಜನಾಂಗದವರಿಂದ ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.
ಹಿಂದಿನ ಗ್ರಾಮೀಣ ಸೊಗಡು ಇಂದಿನ ಸಮಾಜದಲ್ಲಿ ಮರೆಯಾಗುತ್ತಿದೆ. ಹಿಂದೆ ಎಲ್ಲರೂ ಒಗ್ಗಟ್ಟಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರು. ಎತ್ತು ಉಳುಮೆ ಬದಲು ಯಂತ್ರೋಪಕರಣಗಳ ಬಳಕೆಯಾಗುತ್ತಿದೆ. ಗ್ರಾಮೀಣ ಸೊಗಡು ಮರೆಯಾಗಬಾರದು ಎಂಬುದು ಹಿರಿಯರ ಆಶಯ. ಅಂತೆಯೇ ಮಳೆಗಾಲದಲ್ಲಿ ಬಳಕೆಯಾಗುವ ಆಹಾರ ವೈವಿಧ್ಯಗಳನ್ನು ಪ್ರದರ್ಶಿಸಿ ತಿಸಿಸಿನ ಹಬ್ಬವಾಗಿ ಆಚರಿಸಲಾಗುತ್ತಿದೆ.
ಮದ್ದುಸೊಪ್ಪಿನ ಪಾಯಸ, ಬಾಳೆಹಣ್ಣಿನ ಕಜ್ಜಾಯ, ಕೆಸದ ಸಾಂಬಾರು, ಬಿದಿರಿನ ಎಳೆ ಮೊಳಕೆ ಕಣಿಲೆಯ ಪಲ್ಯ, ಅಣಬೆಯ ತಿನಿಸು, ಕಂಚುಹುಳಿಯ ಉಪ್ಪಿನಕಾಯಿ, ಹಲಸಿನ ಬೀಜದ ಚಟ್ನಿ.. ಹೀಗೆ ತರಾವರಿ ಆಹಾರ ವೈವಿಧ್ಯಗಳು ತಿನಿಸು ಹಬ್ಬದಲ್ಲಿ ಅನಾವರಣಗೊಳ್ಳುತ್ತವೆ.
ಕೊಡವ ಹಾಗೂ ಇತರ ಜನಾಂಗದ ಮಳೆಗಾಲದ ಆಹಾರ ವೈವಿಧ್ಯಗಳಿವು. ಕೂವಲೆ ಪುಟ್ಟ್, ಮದ್ದ್ ಪುಟ್ಟ್, ಬಾಳೆನುರ್ಕ್, ಬಡವಕಜ್ಜಾಯ, ಬೂಕ್ಕಜ್ಜಾಯ, ಕೇಂಬು ಕರಿ, ಕಾಡು ಮಾಂಗೆ ಕರಿ, ಕುರುಕರಿ, ಬೈಂಬಳೆ ಕರಿ, ಕುಮ್ಮು ಚಕ್ಕೆಕುರು ಪಜ್ಜಿ ಒಂದೇ ಎರಡೇ ಹತ್ತಾರು ತಿಂಡಿ ತಿನಿಸುಗಳು ನೆರೆದಿದ್ದವರ ಬಾಯಲ್ಲಿ ನೀರೂರಿಸುತ್ತವೆ.
ಜಿಲ್ಲೆಯಲ್ಲಿ ಕೈಲುಪೊಳ್ದು, ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬಗಳು ಮುಖ್ಯವಾದವುಗಳು. ಇನ್ನಿತರ ಹಬ್ಬಗಳನ್ನು ತಮ್ಮ, ತಮ್ಮ ಮನೆಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಜಿಲ್ಲೆಯ ಜನಾಂಗದ ಹಬ್ಬಗಳು ಹಾಗೂ ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಈಚಿನ ದಿನಗಳಲ್ಲಿ ಸಾಮೂಹಿಕವಾಗಿ ಆಚರಿಸಲಾಗುತ್ತಿದೆ.
ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಆಗಸ್ಟ್ 4ರಂದು ಆಟಿಡೊಂಜಿ ದಿನ -2024 ಕಾರ್ಯಕ್ರಮವನ್ನು ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ. ಆಟಿ ಮಾಸದಲ್ಲಿ ತಯಾರಿಸುವ ವಿಶೇಷ ಖಾದ್ಯಗಳ ತಿನಿಸುಗಳ ಪ್ರದರ್ಶನ ಭಾನುವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.