
ಸೋಮವಾರಪೇಟೆ: ಇಲ್ಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸೇರಿದ ಕಟ್ಟಡವೊಂದು ಇಂದು ಪುಂಡ ಪೋಕರಿಗಳ ತಾಣವಾಗಿದೆ.
ಇಲ್ಲಿನ ತಾಲ್ಲೂಕು ಕ್ರೀಡಾಂಗಣದ ಬಳಿ ಇರುವ ಈ ವ್ಯಸನಿಗಳು ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಈ ಹಿಂದೆ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೆಲಸ ಮಾಡುತ್ತಿತ್ತು. ನಂತರ, ಈ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಕಟ್ಟಡದಲ್ಲಿಯೇ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಗೊಂಡಿದ್ದರಿಂದ, ಬಿಇಒ ಕಚೇರಿಯನ್ನು ವಸತಿ ಶಾಲೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬಲವಂತವಾಗಿ ಸರ್ಕಾರಿ ಜೂನಿಯರ್ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಕಳೆದ 3 ವರ್ಷಗಳ ಹಿಂದೆ ಇಲ್ಲಿದ್ದ ಅಂಬೇಡ್ಕರ್ ವಸತಿ ಶಾಲೆ ತನ್ನ ಸ್ವಂತ ಕಟ್ಟಡ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾದ ನಂತರ ಅಲ್ಲಿಗೆ ಸ್ಥಳಾಂತರಿಸಲಾಗಿದೆ.
ಅಂಬೇಡ್ಕರ್ ವಸತಿ ಶಾಲೆ ಇಲ್ಲಿಂದ ತೆರವುಗೊಂಡ ನಂತರ, ಸಮರ್ಪಕವಾಗಿ ವಿದ್ಯಾರ್ಥಿನಿಯರಿಗೆ ಮಾಡಿದ್ದ ಶಾಲೆ ಮತ್ತು ಹಾಸ್ಟೆಲ್ ಕಟ್ಟಡ ಪುಂಡ ಪೋಕರಿಗಳ ಬಳಕೆಗೆ ಉಪಯೋಗವಾಗುತ್ತಿದೆ. ಇಲ್ಲಿ ಸುತ್ತಲು ಗಿಡಗಂಟಿಗಳು ಬೆಳೆದಿದೆ. ಈ ಕಟ್ಟಡದಲ್ಲಿದ್ದ ವಿದ್ಯುತ್ ಸಂಪರ್ಕ ಮಾರ್ಗವನ್ನು ಹಾನಿ ಮಾಡಿ, ಅದರಲ್ಲಿದ್ದ ತಾಮ್ರದ ವಯರ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎಲ್ಲೆಂದರಲ್ಲಿ ಮದ್ಯದ ಬಾಟಲು, ಬೀಡಿ, ಸಿಗರೇಟ್ ತುಂಡುಗಳು ಸೇರಿದಂತೆ ತ್ಯಾಜ್ಯ ತುಂಬಿದೆ. ಮದ್ಯವ್ಯಸನಿಗಳಿಗೆ ಸ್ವರ್ಗವಾಗಿದೆ. ಇದರೊಂದಿಗೆ ಬಿಡಾಡಿ ದನಗಳ ಆಶ್ರಯತಾಣವಾಗಿ ಮಾರ್ಪಟ್ಟಿರುವುದರಿಂದ ಎಲ್ಲೆಡೆ ಸಗಣಿ ರಾಶಿ ಕಂಡುಬರುತ್ತಿದೆ.
ಈ ಕಟ್ಟಡ ಹಾಸ್ಟೆಲ್ ಬಳಕೆಗೆ ಸಿದ್ಧಗೊಳಿಸಿದ್ದರಿಂದ, ಇಲ್ಲಿ ಕ್ರೀಡಾ ವಸತಿ ಶಾಲೆ ಮಾಡಲು ಅನುಕೂಲವಾಗುತ್ತಿತ್ತು. ಪಕ್ಕದಲ್ಲಿಯೇ ಟರ್ಫ್ ಮೈದಾನ ಇರುವುದರಿಂದ ಹೆಚ್ಚಿನ ಅನುಕೂಲವಾಗುವುದು. ಆದರೆ, ಕಟ್ಟಡದ ಸುತ್ತಲೂ ಕಾಡು ಬೆಳೆಯಲು ಬಿಟ್ಟು, ಕೊಠಡಿಗಳಿಗೆ ಬೀಗ ಹಾಕದಿರುವುದರಿಂದ ಅನ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಕೂಡಲೇ ಈ ಕಟ್ಟಡದ ಸುತ್ತಲೂ ಶುಚಿಗೊಳಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕ್ರೀಡಾಪಟು ಅಭಿ ಗೋವಿಂದಪ್ಪ ಮನವಿ ಮಾಡಿದರು.
‘ಸಾಕಷ್ಟು ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳು ಕೆಲಸ ಮಾಡುತ್ತಿದ್ದು, ಇಲ್ಲಿನ ಕಟ್ಟಡವನ್ನು ಸರಿಯಾದ ವ್ಯವಸ್ಥೆ ಮಾಡಿದಲ್ಲಿ ನಾಲ್ಕಾರು ಸರ್ಕಾರಿ ಕಚೇರಿಗಳನ್ನು ಇಲ್ಲಿಯೇ ಕಾರ್ಯನಿರ್ವಹಿಸಲು ಅವಕಾಶವಾಗುವುದು. ಸರ್ಕಾರಕ್ಕೂ ಖರ್ಚು ಉಳಿಯುತ್ತಿತ್ತು. ಜನಪ್ರತಿನಿಧಿಗಳು ಇದರತ್ತ ಗಮನಹರಿಸಬೇಕು’ ಎಂದು ಜಯಕರ್ನಾಟಕದ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು.
‘ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ’
‘ನಮ್ಮ ಕಚೇರಿಯನ್ನು ಒತ್ತಾಯಪೂರ್ವಕವಾಗಿ ಇಲ್ಲಿಂದ ತೆರವುಗೊಳಿಸಲಾಯಿತು. ನಂತರ ಅಂಬೇಡ್ಕರ್ ವಸತಿ ಶಾಲೆ ಇಲ್ಲಿಂದ ಹೋದ ನಂತರ ಈ ಕಟ್ಟಡ ನಿರ್ವಹಣೆ ಇಲ್ಲದ ಹಾಗೆ ಆಗಿದೆ. ನಮ್ಮ ಕಚೇರಿಗೂ ಇಲ್ಲಿಗೂ ಸ್ವಲ್ಪ ದೂರ ಇರುವುದರಿಂದ ಇಲ್ಲಿಗೆ ದಿನಾ ಬಂದು ಹೋಗಲು ಕಷ್ಟವಾಗುತ್ತಿದೆ. ಕಟ್ಟಡದ ಕೊಠಡಿಗಳಿಗೆ ಬೀಗ ಹಾಕಿದರೆ ಒಂದೇ ರಾತ್ರಿಯಲ್ಲಿ ಅವುಗಳನ್ನು ಒಡೆದು ತೆಗೆಯಲಾಗುತ್ತಿದೆ. ಇಲ್ಲಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ಶಾಸಕರು ಇತ್ತ ಗಮನ ಹರಿಸಿ ಇಲ್ಲಿ ವಿದ್ಯಾರ್ಥಿ ವಸತಿ ಕೇಂದ್ರ ಅಥವಾ ಯಾವುದಾದರೂ ಸರ್ಕಾರಿ ಕಚೇರಿಗಳಿಗೆ ನೀಡಿದಲ್ಲಿ ಮಾತ್ರ ಗಟ್ಟಿ ಮುಟ್ಟಾದ ಕಟ್ಟಡ ಉಳಿಸಿಕೊಳ್ಳಲು ಸಾಧ್ಯ’ ಎಂದು ಬಿಇಓ ಕೃಷ್ಣಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.