ADVERTISEMENT

ಮಡಿಕೇರಿ: ಮೂರು ಬಡಾವಣೆಗಳ ಎಲ್ಲ ನಿವಾಸಿಗಳ ಸ್ಥಳಾಂತರ

ಅದಿತ್ಯ ಕೆ.ಎ.
Published 19 ಆಗಸ್ಟ್ 2018, 11:49 IST
Last Updated 19 ಆಗಸ್ಟ್ 2018, 11:49 IST
ಬೆಂಗಳೂರಿನಿಂದ ಬಿಬಿಎಂಪಿ ಕಳಿಸಿರುವ ಸಂಚಾರಿ ಶೌಚಾಲಯಗಳು ಭಾನುವಾರ ಕುಶಾಲನಗರ ತಲುಪಿವೆ
ಬೆಂಗಳೂರಿನಿಂದ ಬಿಬಿಎಂಪಿ ಕಳಿಸಿರುವ ಸಂಚಾರಿ ಶೌಚಾಲಯಗಳು ಭಾನುವಾರ ಕುಶಾಲನಗರ ತಲುಪಿವೆ   

ಮಡಿಕೇರಿ: ನಗರದಲ್ಲಿ ಭಾನುವಾರ ಮುಂಜಾನೆ ಐದು ಗಂಟೆಯಿಂದ ಮಳೆ ಆರಂಭವಾಗಿದೆ. ತೇವಾಂಶ ಹೆಚ್ಚಳದಿಂದ ಕುಸಿಯುತ್ತಿರುವ ಗುಡ್ಡಗಳ ಪ್ರಮಾಣ ಮತ್ತಷ್ಟು ಹೆಚ್ಚಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿನಗರ, ಕಾಟಗೇರಿ ಮತ್ತು ಮಂಗಳೂರು ರಸ್ತೆಯ ಬಲಬದಿಯಲ್ಲಿರುವ ಮನೆಗಳಲ್ಲಿರುವ ಎಲ್ಲ ನಿವಾಸಿಗಳನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಿವಿಧೆಡೆ ಒಟ್ಟು 175 ಜನರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎನ್ನುವ ಮಾಹಿತಿ ಜಿಲ್ಲಾಡಳಿತಕ್ಕೆ ಬಂದಿದೆ. ಅವರನ್ನು ಪತ್ತೆಹಚ್ಚಿ, ರಕ್ಷಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯ ವಿವಿಧೆಡೆ ನಿನ್ನೆ ಮತ್ತು ಮೊನ್ನೆ ಸಂಕಷ್ಟ ಸ್ಥಿತಿಯಲ್ಲಿದ್ದವರು ಕಳಿಸಿದ ಮೆಸೇಜ್‌ಗಳು ಇಂದು ಮತ್ತೆ ಹಲವರ ಮೊಬೈಲ್‌ಗಳಲ್ಲಿ ಗಿರಕಿ ಹೊಡೆಯುತ್ತಿವೆ. ‘ಕಾಲೂರು, ಗಾಳಿಬೀಡು, ಮಾಂಗಲ್‌ಪಟ್ಟಿಯ ವಿವಿಧೆಡೆ ಜನರು ಸಂಕಷ್ಟದಲ್ಲಿದ್ದಾರೆ’ ಎಂಬ ಈ ಮೆಸೇಜ್‌ಗಳು ನಿನ್ನೆಯ ಮಟ್ಟಿಗೆ ನಿಜವಾಗಿದ್ದವು. ಆದರೆ ಇಂದು ಅವರಲ್ಲಿ ಬಹುತೇಕರನ್ನು ರಕ್ಷಿಸಲಾಗಿದೆ. ಈಗ ಮತ್ತೆ ಮೆಸೇಜ್‌ಗಳು ತಿರುವುಮುರುವಾಗಿ ಓಡಾಡುತ್ತಿರುವುದು ಪರಿಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಗೊಂದಲ ಉಂಟುಮಾಡಿದೆ.

ADVERTISEMENT

ಶೌಚಾಲಯಗಳು ಬಂದವು:ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂತ್ರಸ್ತರಾಗಿರುವವರಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ನೆರವು ಹರಿದು ಬರುತ್ತಿದೆ. ಆದರೆ ಅಲ್ಲಿನ ಜನರಿಗೆ ಇದೀಗ ಆಹಾರ, ಬಟ್ಟೆಗಿಂತಲೂ ಮುಖ್ಯವಾಗಿ ಶೌಚಾಲಯಗಳು ಬೇಕಾಗಿವೆ.

ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳಲ್ಲಿ ಸ್ಥಾಪಿಸಿರುವ ಗಂಜಿಕೇಂದ್ರಗಳಲ್ಲಿ ಇರುವವರು 300 ಜನ. ಆದರೆ ಇರುವ ಶೌಚಾಲಯ ಮಾತ್ರ ಮೂರು ಮತ್ತೊಂದು. ಹೀಗಾಗಿ ಹಾಗೂಹೀಗೂ ರಾತ್ರಿ ಕಳೆದಿದ್ದ ಜನರಿಗೆ ಮುಂಜಾನೆ ನಿಸರ್ಗದ ಕರೆ ತೀರಿಸುವುದು ಕಷ್ಟವಾಯಿತು.

ಗಂಜೀಕೇಂದ್ರದ ಉಸ್ತುವಾರಿ ಹೊತ್ತವರು ಈ ವಿಷಯವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು. ಮುಖ್ಯಮಂತ್ರಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಪಾಲಿಕೆಯು 100 ಮೊಬೈಲ್ ಶೌಚಾಲಯಗಳನ್ನು ಕೊಡಗಿಗೆ ಕಳುಹಿಸಿಕೊಟ್ಟಿದೆ. ಈ ಶೌಚಾಲಯಗಳು ಕುಶಾಲನಗರ ತಲುಪಿವೆ.

50 ಶೌಚಾಲಯಗಳನ್ನು ಮಡಿಕೇರಿಗೆ ಕಳುಹಿಸಿಕೊಟ್ಟು ಉಳಿದವನ್ನು ಶುಂಠಿಕೊಪ್ಪು ಮತ್ತು ಕುಶಾಲನಗರಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಹೇಳಿದ್ದಾರೆ.

‘ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಶನಿವಾರ ಕರೆ ಮಾಡಿ ಮೊಬೈಲ್ ಶೌಚಾಲಯ ಕಳುಹಿಸುವಂತೆ ಹೇಳಿದ್ದರು. ತಕ್ಷಣವೇ ಶೌಚಾಲಯಗಳನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದೇವೆ. ಅವು ಈಗಾಗಲೇ ಕುಶಾಲನಗರ ತಲುಪಿವೆ' ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಡಿಕೇರಿ ಕೊಡವ ಸಮಾಜದ ಗಂಜಿಕೇಂದ್ರ

ಮೊದಲು ಕೈ ಹಿಡಿದವರು:ಮಳೆಯಿಂದ ಮಡಿಕೇರಿ, ಸೋಮವಾರಪೇಟೆ ಹಾಗೂ ಕುಶಾಲನಗರ ಸುತ್ತಮುತ್ತ ಹೆಚ್ಚಾಗಿ ಹಾನಿಯಾಗಿದೆ. ಅಷ್ಟಾಗಿ ತೊಂದರೆ ಅನುಭವಿಸದ ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಪೊನ್ನಂಪೇಟೆ, ಗೋಣಿಬೀಡು, ವಿರಾಜಪೇಟೆ, ಶ್ರೀಮಂಗಲ ಮತ್ತು ಬಾಳೆಲೆ ಭಾಗಗಳಿಂದ ಸಂತ್ರಸ್ತರಿಗೆ ಆರಂಭಿಕ ನೆರವು ಹರಿದು ಬಂತು.

ಜಿಲ್ಲಾಡಳಿತದ ಜೊತೆಜೊತೆಗೆ ಓಂಕಾರ ಸದನ ಮತ್ತು ಸೇವಾ ಭಾರತಿ ಸಂಸ್ಥೆಗಳೂ ಸಂತ್ರಸ್ತರಿಗೆ ನೆರವಾಗುತ್ತಿವೆ. ವಿವಿಧ ಜಿಲ್ಲೆಗಳಿಂದ ಲಾರಿಗಳಲ್ಲಿ ಬರುತ್ತಿರುವ ಸರಕನ್ನು ಇಳಿಸಿಕೊಳ್ಳುವುದು ಮತ್ತು ಹಂಚಿಕೆ ಮಾಡುವಲ್ಲಿ ಜಿಲ್ಲಾಡಳಿತ ನಿಯೋಜಿಸಿರುವ ಸಿಬ್ಬಂದಿಯ ಜೊತೆಗೆ ಸ್ವಯಂ ಸೇವಕರು ಕೈಜೋಡಿಸಿದ್ದಾರೆ.

ಮೈಸೂರಿನೊಂದಿಗೆ ರಸ್ತೆ ಸಂಪರ್ಕ ಮರುಸ್ಥಾಪನೆಯಾದ ನಂತರ ಅಕ್ಕಿ ಮತ್ತು ನೀರು ಯಥೇಚ್ಛವಾಗಿ ಬರುತ್ತಿದೆ. ಇದರ ಜೊತೆಗೆ ತೊಗರಿಬೇಳೆ, ನ್ಯಾಪ್‌ಕಿನ್, ಹೊದಿಕೆ, ಬಟ್ಟೆಗಳನ್ನು ಜನರು ಕಳುಹಿಸಿಕೊಡುತ್ತಿದ್ದಾರೆ. ಹಳೇಬಟ್ಟೆಗಳನ್ನು ಸ್ವೀಕರಿಸುತ್ತಿಲ್ಲ. ಬಳಕೆ ಮಾಡದ, ಹೊಸ ಬಟ್ಟೆಗಳನ್ನು ಮಾತ್ರ ವಿತರಣೆಗೆ ಪರಿಗಣಿಸಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗೆಹರಿದಿದೆ.

ಗಂಜೀಕೇಂದ್ರಗಳಲ್ಲಿ ಪಲಾವ್, ಅನ್ನ-ಸಾಂಬಾರ್ ಮತ್ತು ಟೀಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಿಂದಲೂ ಆಹಾರ ಪೋಲಾಗಿರುವ ಅಥವಾ ಜನರಿಗೆ ಲಭ್ಯವಾಗದಿರುವ ಮಾಹಿತಿ ಬಂದಿಲ್ಲ.

ಮನೆ ಕಟ್ಟಿಕೊಳ್ಳುವ ಚಿಂತೆ:ಗುಡ್ಡ ಕುಸಿಯುವ ಭೀತಿಯಿಂದ ಮನೆಯಿಂದ ಹೊರಬರುತ್ತಿರುವ ಅನೇಕರು ಕೈಲೊಂದು ಸೂಟ್‌ಕೇಸ್‌ ಅಥವಾ ಟ್ರಂಕ್‌ ಹಿಡಿದು ಗಂಜಿಕೇಂದ್ರಗಳಿಗೆ ಬರುತ್ತಿದ್ದಾರೆ. ಅದರಲ್ಲಿ ಮಕ್ಕಳ ಮಾರ್ಕ್ಸ್‌ಕಾರ್ಡ್‌, ಬ್ಯಾಂಕ್ ಪಾಸ್‌ಪುಸ್ತಕಗಳು, ರೇಷನ್‌ ಕಾರ್ಡ್, ಗುರುತಿನ ಚೀಟಿಗಳು, ಆಭರಣಗಳು ಸೇರಿದಂತೆ ಅಮೂಲ್ಯ ಎನಿಸಿದ್ದನ್ನು ತರುತ್ತಿದ್ದಾರೆ. ಕೆಲವರ ಟ್ರಂಕ್‌ಗಳಲ್ಲಿ ಮದುವೆ ಆಲ್ಬಂಗಳು, ಆಪ್ತರ ಫೋಟೊಗಳೂ ಇವೆ. ಇದು ಬಿಟ್ಟರೆ ಒಂದು ಚಾಪೆ, ಹೊದಿಕೆ, ಕೆಲ ಬಟ್ಟೆಗಳು ಇವೆ.

‘ಮಳೆ ಬಿಟ್ಟ ನಂತರ ನಾವು ವಾಪಸ್ ಹೋಗಬೇಕು. ಅಷ್ಟುಹೊತ್ತಿಗೆ ಮನೆ ಏನಾಗಿರುತ್ತೋ ಏನೋ' ಎಂಬ ಆತಂಕ ಬಹುತೇಕರಲ್ಲಿದೆ. ಸತತ ಮಳೆಯಿಂದ ಕಾಫಿ-ಕಾಳು ಮೆಣಸು ಹಾಳಾಗಿದೆ. ಮಳೆ ಬಿಟ್ಟ ನಂತರ ಮನೆ ಕಟ್ಟಿಕೊಳ್ಳುವುದು ಹೇಗೆ ಎಂಬುದು ಬಹುತೇಕರ ಮುಂದಿರುವ ಪ್ರಶ್ನೆ.

ಹಠಾತ್ ಪ್ರವಾಹ

ಸತತ ಮಳೆಯಿಂದ ಕುಸಿಯುತ್ತಿರುವ ಗುಡ್ಡಗಳು ಹಠಾತ್ ಪ್ರವಾಹ ಸೃಷ್ಟಿಸುತ್ತಿವೆ. ಕೆಸರು ತುಂಬಿದ ರಭಸ ನೀರಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ದೊಡ್ಡ ಸವಾಲಾಗಿದೆ. ನಗರ ಸಮೀಪದ ಕಾಟಕೇರಿಯಲ್ಲಿ ಸಿಲುಕಿದ್ದ 20 ಮಂದಿಯನ್ನು ಭಾನುವಾರ ರಕ್ಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.