ADVERTISEMENT

ಕುಶಾಲನಗರ: ‘ಅಕ್ಕಮಹಾದೇವಿ ಆದರ್ಶ ಸಮಾಜಕ್ಕೆ ದಾರಿದೀಪ’

ಅಕ್ಕನ ಬಳಗದಿಂದ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 8:06 IST
Last Updated 23 ಏಪ್ರಿಲ್ 2025, 8:06 IST
ಕುಶಾಲನಗರದ ಅಕ್ಕನ ಬಳಗದಿಂದ ಎಪಿಸಿಎಂಎಸ್ ಸಭಾಂಗಣದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು
ಕುಶಾಲನಗರದ ಅಕ್ಕನ ಬಳಗದಿಂದ ಎಪಿಸಿಎಂಎಸ್ ಸಭಾಂಗಣದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು   

ಕುಶಾಲನಗರ: ‘ಹನ್ನೆರಡನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿ ಈ ನಾಡು ಕಂಡ ಶ್ರೇಷ್ಠ ಶಿವಶರಣೆ. ಅಕ್ಕನ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಲಿವೆ’ ಎಂದು ಕೆ.ಆರ್.ನಗರ ತಾಲ್ಲೂಕು ಲಾಳನಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಹೇಳಿದರು.

ಪಟ್ಟಣದ ಅಕ್ಕನ ಬಳಗದಿಂದ ಇಲ್ಲಿನ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಅವರು ಪ್ರವಚನ ನೀಡಿದರು.

‘ಸಮಾಜದ ಸಂಪತ್ತುಗಳಾಗಿ ನಮ್ಮ ಮಕ್ಕಳನ್ನು ನಾವು ಬೆಳೆಸಬೇಕೆಂದರೆ ಮಕ್ಕಳ ಹಣೆಯಲ್ಲಿ ವಿಭೂತಿ ಹಾಗೂ ಅಂಗದ ಮೇಲೆ ಲಿಂಗವನ್ನು ಪ್ರತಿಷ್ಠಾಪಿಸಬೇಕು. ಈ ಮೂಲಕ ಶಿವಶರಣರ ಪಂಥದ ನಮ್ಮ ವೀರಶೈವ ಪರಂಪರೆ ಹಾಗೂ ಸಂಸ್ಕಾರ ರಕ್ಷಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಇಂದಿನ ಮಹಿಳೆಯರು ಅಕ್ಕಮಹಾದೇವಿ ಅವರ ಆದರ್ಶ ಹಾಗೂ ಚಿಂತನೆಗಳನ್ನು ಹೊಂದುವ ಮೂಲಕ ನಮ್ಮ ಶರಣ ಪರಂಪರೆಯ ಸಂಸ್ಕಾರಗಳನ್ನು ಜೋಪಾನ ಮಾಡಬೇಕು’ ಎಂದು ಹೇಳಿದರು.

ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಚಿತ್ರದುರ್ಗದ ಬಸವ ಮಹಾಮನೆಯ ಶರಣೆ ದ್ರಾಕ್ಷಾಯಿಣಿ ದೇವಿ, ಶಿಕ್ಷಕ ಹುಲುಸೆ ಬಸವರಾಜು ಮಾತನಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ, ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಮೂರ್ತಿ, ವೀರಶೈವ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಸ್.ನಂದೀಶ್, ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೀಪಿಕಾ ಕರುಣ, ಅಕ್ಕನಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಮಾಜಿ ಅಧ್ಯಕ್ಷೆ ವಿಜಯಪಾಲಾಕ್ಷ, ಅಕ್ಕನ ಬಳಗದ ಉಪಾಧ್ಯಕ್ಷೆ ಪ್ರೇಮಾ ಮಹದೇವಪ್ಪ, ಖಜಾಂಚಿ ನೇತ್ರಾವತಿ, ನಿರ್ದೇಶಕರಾದ ಮಣಿಯಮ್ಮ, ಮೋಹಿನಿ, ಲೇಖನಾ, ಮಮತಾ, ನಾಗರತ್ನ, ಲತಾ, ಗೀತಾ, ಸರೋಜಾ ಪಾಲ್ಗೊಂಡಿದ್ದರು. ಶಿಕ್ಷಕಿ ನಿರ್ಮಲಾ ಶಿವಲಿಂಗ ನಿರೂಪಿಸಿದರು. ಅಕ್ಕನ ಬಳಗದ ಕಾರ್ಯದರ್ಶಿ ಮನುದೇವಿ ಜಗದೀಶ್ ಸ್ವಾಗತಿಸಿದರು. ಮೋಹಿನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.