ADVERTISEMENT

ಹೆಣ್ಣಿನ ನೈಜ ಧ್ವನಿ ಅಕ್ಕಮಹಾದೇವಿ: ಕಾವೇರಿ

ಕುಶಾಲನಗರದಲ್ಲಿ ಅಕ್ಕಮಹಾದೇವಿ ಜಯಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 14:13 IST
Last Updated 17 ಏಪ್ರಿಲ್ 2025, 14:13 IST
ಕುಶಾಲನಗರ ಎಂಜಿಎಂ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು
ಕುಶಾಲನಗರ ಎಂಜಿಎಂ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು   

ಕುಶಾಲನಗರ: ‘ಹನ್ನೆರಡನೇ ಶತಮಾನದ ಮಹಾಶಿವಶರಣೆ ಅಕ್ಕಮಹಾದೇವಿ ಇಡೀ ಮನುಕುಲದ ಮಹಾಬೆಳಕು. ಮಹಿಳೆಯರ ಪಾಲಿಗೆ ಹಿರಿಯಕ್ಕ’ ಎಂದು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಾವೇರಿ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಹುಟ್ಟು ಮತ್ತು ಮುಟ್ಟು ವಿಷಯದಲ್ಲಿ ಮೈಲಿಗೆಯ ಸೂತಕವನ್ನು ಆಚರಿಸುತ್ತಾ ಬಂದ ಕೆಟ್ಟ ಪರಂಪರೆಯಿಂದಾಗಿ ಮಹಿಳೆ ಮೈಲಿಗೆಯ ಜೀವಿಯಾಗಬೇಕಾಯಿತು. ಅಂದು ಮಹಿಳೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕವಾಗಿ ಯಾವ ಬಗೆಯ ಸ್ವಾತಂತ್ರ್ಯವೂ ಇಲ್ಲದೇ ಶೋಷಣೆಗೆ ಒಳಗಾದಾಗ ಹೆಣ್ಣಿನ ನೈಜ ಧ್ವನಿಯಾಗಿ ಅಕ್ಕಾಮಹಾದೇವಿ ಸ್ತ್ರೀ ಕುಲವನ್ನು ಬೆಳಗಿದ ಮಹಾದೀಪ’ ಎಂದು ಬಣ್ಣಿಸಿದರು.

ADVERTISEMENT

‘ವಿದ್ಯಾರ್ಥಿಗಳು ಇತಿಹಾಸವನ್ನು ಅರಿತು, ಅಧ್ಯಯನ ಮಾಡುವ ಮೂಲಕ ನಮ್ಮ ನಾಡಿನ ಭವ್ಯ ಪರಂಪರೆಯನ್ನು ಗೌರವಿಸಬೇಕು. ಜೊತೆಗೆ ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಾಹಿತಿ ಮಡಿಕೇರಿಯ ಕೃಪಾ ದೇವರಾಜು ಮಾತನಾಡಿ, ‘ಕೌಶಿಕ ರಾಜನ ಅಟ್ಟಹಾಸಕ್ಕೆ ಸಿಲುಕಿದ ಅಕ್ಕಾಮಹಾದೇವಿ ಕಣ್ಣಿಗೆ ಕಾಣುವ ಮೈಮೇಲೆ ಉಟ್ಟ ಬಟ್ಟೆಗಳನ್ನು ಸೆಳೆದುಕೊಳ್ಳಬಹುದೇ ಹೊರತು ಕಾಣದಂತಿರುವ ಅಂತರಂಗದ ಅಮೂಲ್ಯ ಸಿರಿ ಹಾಗೂ ವೈರಾಗ್ಯವನ್ನು ಕಸಿಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ ಧೀರಮಹಿಳೆ’ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಕಣಿವೆ ಭಾರಧ್ವಾಜ್ ಆನಂದ ತೀರ್ಥ ಮಾತನಾಡಿ, ‘ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಖಜಾಂಚಿ ಕೆ.ಪಿ.ಪರಮೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ನಂದೀಶ್, ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಖಜಾಂಚಿ ಎನ್.ಎನ್.ನಂಜಪ್ಪ, ಮಹಾತ್ಮಾ ಗಾಂಧಿ ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲೆ ಟಿ.ಎ.ಲಿಖಿತಾ, ಕನ್ನಡ ಉಪನ್ಯಾಸಕ ಮಂಜೇಶ್ ಇದ್ದರು.

ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ವಿಜಯಾ ಪಾಲಾಕ್ಷ, ಕದಳಿ ವೇದಿಕೆ ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಕಾರ್ಯದರ್ಶಿ ಜಿ.ಎಸ್.ವೇದಾವತಿ, ಮನು ಜಗದೀಶ್, ಪುಷ್ಪ, ಕೂಡಿಗೆ ಪ್ರೇಮ ಪಾಲ್ಗೊಂಡಿದ್ದರು.

ಇದೇ ಸಂದರ್ಭ ಸಾಹಿತಿಗಳಾದ ಡಾ.ಕಾವೇರಿ, ಕೃಪಾ ದೇವರಾಜು ಹಾಗೂ ಸಾಧಕಿ ಪ್ರೇಮಾ ಮಹದೇವಪ್ಪ ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.