ಮಡಿಕೇರಿ: ಇಲ್ಲಿನ ಚೇನ್‌ಗೇಟ್ ಬಳಿ ಶನಿವಾರ ಸ್ಕೂಟರ್ ಮತ್ತು ಟೆಂಪೊ ನಡುವೆ ನಡೆದ ಅಪಘಾತದಲ್ಲಿ ಭಾಗಮಂಡಲದ ನಿವಾಸಿ ಗಜೇಶ್ವರ (48) ಎಂಬುವವರು ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಭಾಗಮಂಡಲದ ಕಿಶೋರ್ (40) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಾರ್ಯಕ್ರಮವೊಂದರ ನಿಮಿತ್ತ ಬಂದಿದ್ದ ಅವರು ವಾಪಸ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಗಜೇಶ್ವರ ಅವರು ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ಬಂದಿದ್ದಾರೆ. ಈ ವೇಳೆ ಟೆಂಪೊ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಫಿ ತೋಟದೊಳಗೆ ಗಾಂಜಾ ಬೆಳೆದಿದ್ದ ಆರೋಪಿ ಬಂಧನ
ಕಾಫಿ ತೋಟದೊಳಗೆ ಗಾಂಜಾ ಬೆಳೆದಿದ್ದ ಎಮ್ಮೆಮಾಡು ಗ್ರಾಮದ ನಿವಾಸಿ ಕನ್ನಡಿಯಂಡ ಮಹಮ್ಮದ್ ಕೆ.ಎಂ. (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಗ್ರಾಮದ ಮಾಂದಲ್ ಅಂಗನವಾಡಿ ಸಮೀಪ ತನ್ನ ಮನೆಯ ಸುತ್ತಲೂ ಇದ್ದ ಕಾಫಿ ತೋಟದ ಮಧ್ಯೆ 42 ಗಾಂಜಾ ಗಿಡಗಳನ್ನು ಬೆಳೆಸಿದ್ದ. ಈತನಿಂದ ಒಟ್ಟು 35 ಕೆ.ಜಿ 675 ಗ್ರಾಂ ತೂಕದ ಹಸಿ ಗಾಂಜಾ ಹಾಗೂ 275 ಗ್ರಾಂ ಒಣಗಿದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್‌ಪಿ ರವಿ, ಇನ್‌ಸ್ಪೆಕ್ಟರ್ ಐ.ಪಿ.ಮೇದಪ್ಪ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.