ADVERTISEMENT

ಸೋಮವಾರಪೇಟೆ: ಆಂಜನೇಯ ಗುಡಿಗೆ ಬೃಹತ್ ಗೋಪುರ

ನವೀಕರಣಗೊಳ್ಳುತ್ತಿದೆ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಜನೇಯ ದೇವಾಲಯ

ಡಿ.ಪಿ.ಲೋಕೇಶ್
Published 13 ಜುಲೈ 2025, 3:03 IST
Last Updated 13 ಜುಲೈ 2025, 3:03 IST
ಸೋಮವಾರಪೇಟೆಯ ಆಂಜನೇಯ ದೇವಾಲಯದ ನೂತನ ಗೋಪುರ ಕಾಮಗಾರಿ ಕೈಗೊಂಡಿರುವುದು
ಸೋಮವಾರಪೇಟೆಯ ಆಂಜನೇಯ ದೇವಾಲಯದ ನೂತನ ಗೋಪುರ ಕಾಮಗಾರಿ ಕೈಗೊಂಡಿರುವುದು   

ಸೋಮವಾರಪೇಟೆ: ಇಲ್ಲಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಬಳಿಯ ಆಂಜನೇಯ ದೇವಾಲಯದ ಆವರಣದಲ್ಲಿ ನೂತನವಾಗಿ ₹ 4 ಕೋಟಿ ವೆಚ್ಚದಲ್ಲಿ ದೇವಾಲಯದ ಕಟ್ಟಡ ನಿರ್ಮಾಣವಾಗುತ್ತಿದ್ದು, ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ.

ಚೌಡ್ಲು ಗ್ರಾಮದ ಚಿಕ್ಕ ಗುಡಿಯಲ್ಲಿ 800 ವರ್ಷಗಳಿಂದಲೂ ಆಂಜನೇಯ ವಿಗ್ರಹವನ್ನು ಪೂಜಿಸಲಾಗುತ್ತಿದೆ. ನಂತರದ ದಿನಗಳಲ್ಲಿ ಸ್ವಲ್ಪ ವಿಸ್ತರಿಸಿದರೂ, ಹಳೆಯ ಕಟ್ಟಡದಲ್ಲಿಯೇ ದೇವಸ್ಥಾನವಿದ್ದು, ಇದು ಚಿಕ್ಕದಾಗಿತ್ತು. ಇದನ್ನು ಅರಿತ ದೇವಾಲಯ ಸಮಿತಿ, ನೂತನ ದೇವಾಲಯ ನಿರ್ಮಿಸಲು ರೂಪುರೇಷೆ ತಯಾರಿಸಿ ಸಮಿತಿ ರಚಿಸಿ 4 ವರ್ಷಗಳಿಂದ ಪ್ರಯತ್ನಿಸುತ್ತಿದೆ.

‘ಜನಪ್ರತಿನಿಧಿಗಳು, ಮುಜರಾಯಿ ಇಲಾಖೆ ಮತ್ತು ಸಾರ್ವಜನಿಕರು ದೇಣಿಗೆ ನೀಡುತ್ತಿದ್ದು, ತಮಿಳುನಾಡಿನ ಸೇಲಂ ಜಿಲ್ಲೆಯ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ. ಗೋಪುರದ ಕಾಮಗಾರಿ ಮುಗಿದಿದ್ದು, ಒಳಾಂಗಣದ ಕೆಲಸ ಭರದಿಂದ ಸಾಗುತ್ತಿದೆ’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ತಿಳಿಸಿದರು.

ADVERTISEMENT

ದೇವಾಲಯಕ್ಕೆ ಹೆಚ್ಚಿನ ಹಣಕಾಸಿನ ನೆರವು ಬೇಕಾಗಿದೆ. ಹಿಂದಿನ ಮತ್ತು ಹಾಲಿ ಶಾಸಕರ ನೆರವಿನಿಂದ ₹ 3 ಕೋಟಿಗೂ ಹೆಚ್ಚಿನ ಹಣ ವ್ಯಯಿಸಲಾಗಿದೆ. ದಾನಿಗಳು ನೆರವು ನೀಡಬೇಕು’ ಎಂದು ಸಮಿತಿ ಅಧ್ಯಕ್ಷ ಸೀತಾರಾಮ್ ಮನವಿ ಮಾಡಿದರು.‌

ಪುರಾತನ ಇತಿಹಾಸ:

ಈ ದೇಗುಲಕ್ಕೆ ತಲೆಮಾರುಗಳ ಇತಿಹಾಸ ಇದೆ. ಕಕ್ಕೆಹೊಳೆಯ ಸಮೀಪ ಇರುವ ಈ ಆಂಜನೇಯಸ್ವಾಮಿ ಮೂರ್ತಿ ಇದ್ದ ಚಿಕ್ಕಗುಡಿಯ ಸುತ್ತ ಗಿಡಗಳು ಬೆಳೆದುಕೊಂಡಿತ್ತು. ದನ ಮೇಯಿಸಲು ಹೋದವರು ಆ ವಿಗ್ರಹವನ್ನು ಕಂಡು ಕಾಡುಗುಲಾಬಿ ಹೂವು ಮತ್ತು ಲಕ್ಕೆಸೊಪ್ಪುಗಳಿಂದ ಪೂಜೆ ಸಲ್ಲಿಸುತ್ತಿದ್ದರು. ದನಕರುಗಳಿಗೆ ಕಾಯಿಲೆಗಳು ಬಂದಾಗ ಈ ಆಂಜನೇಯ ದೇವರಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಗುಣಮುಖವಾಗುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿತು.

ಅಧಿಕಾರಿಯಾಗದ್ದವರೊಬ್ಬರು ದೇವರಲ್ಲಿ ಹರಕೆಹೊತ್ತು ತಮ್ಮ ಇಷ್ಟಾರ್ಥವನ್ನು ಪಡೆದಿದ್ದರಂತೆ. ದೇವರಲ್ಲಿ ನಂಬಿಕೆ ಇಟ್ಪ ಅಧಿಕಾರಿ ಮತ್ತು ದನಗಾಹಿಗಳು ಒಟ್ಟು ಸೇರಿ ಕಾಡುಕಲ್ಲುಗಳನ್ನೇ ಜೋಡಿಸಿ ಪುಟ್ಪ ಗುಡಿಯೊಂದನ್ನು ಕಟ್ಟಿ ಅದರಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬ ಪ್ರತೀತಿ ಇದೆ.

ಈಗ ನೂರಾರು ಮಂದಿ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದು, ಚಿಕ್ಕಗುಡಿಯನ್ನು ನವೀಕರಣ ಮಾಡಿ ದೊಡ್ಡ ದೇಗುಲ ಕಟ್ಟುವ ಕಾರ್ಯ ನಡೆಯುತ್ತಿದೆ.

ಈಗ 4 ಅಂತಸ್ತುಗಳ 43 ಅಡಿ ಎತ್ತರದ ಬೃಹತ್ ಗೋಪುರ ನಿರ್ಮಾಣವಾಗುತ್ತಿದ್ದು, ಇಷ್ಟು ದೊಡ್ಡ ಗೋಪುರವುಳ್ಳ ದೇಗುಲ ಈ ಭಾಗದಲ್ಲಿ ಇಲ್ಲ ಎಂಬುದು ವಿಶೇಷ. ಕಾಮಗಾರಿ ಪೂರ್ಣಗೊಂಡ ನಂತರ ಈ ದೇಗುಲ ಜಿಲ್ಲೆಯ ಪ್ರಮುಖ ದೇಗುಲಗಳ ಸಾಲಿನಲ್ಲಿ ಸೇರಲಿದೆ ಎಂಬುದು ಸ್ಥಳೀಯರ ವಿಶ್ವಾಸ.

ಸೋಮವಾರಪೇಟೆಆಂಜನೇಯ ದೇವಾಲಯದ ಕಾಮಗಾರಿ ಕೈಗೊಂಡಿರುವುದು
ಕಂಗೊಳಿಸುತ್ತಿರುವ ನೂತನ ರಾಜಗೋಪುರ
ಸೋಮವಾರಪೇಟೆಯಲ್ಲಿ ಈ ಹಿಂದೆ ಕಲ್ಲಿನ ಚಿಕ್ಕ ಮಂಟಪ ನಿರ್ಮಿಸಿ ಪೂಜಿಸಿದ್ದ ಆಂಜನೇಯ ಮೂರ್ತಿ

43 ಅಡಿ ಎತ್ತರದ ಗೋಪುರ

‘ಇಲ್ಲಿನ ಆಂಜನೇಯ ದೇವಾಲಯದಲ್ಲಿ ನಿರ್ಮಿಸುತ್ತಿರುವ ರಾಜಗೋಪುರ 43 ಅಡಿಗಳಷ್ಟು ಎತ್ತರವಿದ್ದು 4 ಅಂತಸ್ತನ್ನು ಹೊಂದಿದ್ದು ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಮಾದರಿಯ ಗೋಪುರದಲ್ಲಿ ಸಾಕಷ್ಟು ಕಲಾಕೃತಿಗಳಿದ್ದು ಆಕರ್ಷಕವಾಗಿರುತ್ತದೆ. ಅಕ್ಕಪಕ್ಕದಲ್ಲಿ ಎರಡು ಚಿಕ್ಕ ಗೋಪುರಗಳೊಂದಿಗೆ ಮಧ್ಯದಲ್ಲಿ ಪ್ರಧಾನ ಗೋಪುರ ಇರುತ್ತದೆ’ ಎಂದು ಗೋಪುರ ನಿರ್ಮಿಸುತ್ತಿರುವ ಶಪತಿ ತಮಿಳುನಾಡಿನ ಅನ್ಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.