ADVERTISEMENT

ಶನಿವಾರಸಂತೆ: ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ

ಶನಿವಾರಸಂತೆಯ ಬೀರಲಿಂಗೇಶ್ವರ, ಪ್ರಬಲಭೈರವಿ ಪರಿವಾರ ದೇವರುಗಳ ಆರಾಧನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 3:07 IST
Last Updated 11 ನವೆಂಬರ್ 2025, 3:07 IST
ಶನಿವಾರಸಂತೆಯ ಪ್ರಬಲ ಭೈರವಿ ಸನ್ನಿಧಿಯಲ್ಲಿ ನಡೆದ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು
ಶನಿವಾರಸಂತೆಯ ಪ್ರಬಲ ಭೈರವಿ ಸನ್ನಿಧಿಯಲ್ಲಿ ನಡೆದ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು   
ಮಹೋತ್ಸವದಲ್ಲಿ ಸರ್ವಧರ್ಮದ ಭಾವೈಕ್ಯತೆ | ಸಾರ್ವಜನಿಕರಿಗೆ ಅನ್ನ ಸಂತರ್ಪಣೆ 

ಶನಿವಾರಸಂತೆ: ಶನಿವಾರಸಂತೆ ಬೀರಲಿಂಗೇಶ್ವರ, ಪ್ರಬಲ ಭೈರವಿ ಹಾಗೂ ಪರಿವಾರ ದೇವರ 7ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.

ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಮುಂಜಾನೆ 5.30ಕ್ಕೆ ಪಟ್ಟಣದ ಸಹಕಾರ ಬ್ಯಾಂಕ್ ಹತ್ತಿರದಿಂದ ಗಂಗಾ ಪೂಜೆ, ಗೋಪೂಜೆ, ಮಹಾಮಂಗಳಾರತಿ ಪೂಜೆ ನೇರವೇರಿಸಿದ ಬಳಿಕ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಮಹಿಳೆಯರು ಕಳಸ, ಕುಂಭ ಮೆರವಣಿಗೆ ಮೂಲಕ ದೇವಸ್ಥಾನ ಪ್ರವೇಶಿಸಿ ಕಳಸವನ್ನು ದೇವರ ಸನ್ನಿಧಿಯಲ್ಲಿ ಇಟ್ಟರು.

ಬೆಳಿಗ್ಗೆ 7ಕ್ಕೆ ಪಟ್ಟಣದ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ, ಬೆಳಿಗ್ಗೆ 7.30ಕ್ಕೆ ಊರು ಒಡೆಯ ದೇವರ ಗುಡಿಯಲ್ಲಿ ದೇವರಿಗೆ ಪೂಜೆ ನೆರವೇರಿಸಲಾಯಿತು.

ADVERTISEMENT

ಬೆಳಿಗ್ಗೆ 9ಕ್ಕೆ  ಬಿದರೂರು ಗ್ರಾಮದ ಬ್ರಹ್ಮದೇವರ ಗುಡಿಯಲ್ಲಿ ಬ್ರಹ್ಮದೇವರಿಗೆ, ಬಿದರೂರು ಬಸವೇಶ್ವರ ದೇವಸ್ಥಾನದಲ್ಲಿ, ಹೆಮ್ಮನೆ ಗ್ರಾಮದ ಮಾರಮ್ಮ ಗುಡಿ ಮತ್ತು ಬಸವೇಶ್ವರ ದೇವಸ್ಥಾನದಲ್ಲಿ, ತ್ಯಾಗರಾಜ ಕಾಲೊನಿಯಲ್ಲಿರುವ ಚೌಡೇಶ್ವರಿ ಸನ್ನಿಧಿಯಲ್ಲಿ ದೇವಿಗೆ ಮಹಾಪೂಜೆ ನೆರವೇರಿಸಲಾಯಿತು.

ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದಲ್ಲಿ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಪಟ್ಟಣದ ಮುಖ್ಯರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ದೇವರುಗಳಿಗೆ ಮಹಾಪೂಜೆ ನೆರವೇರಿಸಲಾಯಿತು. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಜೆ ಬೀರಲಿಂಗೇಶ್ವರ, ಪ್ರಬಲ ಭೈರವಿ ಸನ್ನಿಧಿಯಲ್ಲಿ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ನವಗ್ರಹ ಮತ್ತು ಮೃತ್ಯುಂಜಯ ಪೂಜೆ, ವಿವಿಧ ಹೋಮ, ಮೂಲ ದೇವರಿಗೆ ಪೂಜಾ ವಿಧಾನಗಳನ್ನು ನೆರವೇರಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಅರ್ಚಕ ಮಹಾಂತೇಶ್ ಭಟ್ ನೇತೃತ್ವದಲ್ಲಿ ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಹೋತ್ಸವದಲ್ಲಿ ಹಿಂದೂ ಭಕ್ತರೂ ಸೇರಿದಂತೆ ಮುಸ್ಲಿಂ ಸಮುದಾಯದವರು ಮತ್ತು ವಿವಿಧ ಜಾತಿ ಜನಾಂಗದವರು ಪಾಲ್ಗೊಂಡು ಭಾವೈಕ್ಯತೆ ಮೆರೆದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.