ADVERTISEMENT

ಮಡಿಕೇರಿ: ಗಾಯನದ ಮೋಡಿಗಾರ ಅನ್ವಿತ್‌ಕುಮಾರ್

ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯ ಗ್ರಾಮೀಣ ಪ್ರತಿಭೆ

ಕೆ.ಎಸ್.ಗಿರೀಶ್
Published 28 ಫೆಬ್ರುವರಿ 2024, 5:00 IST
Last Updated 28 ಫೆಬ್ರುವರಿ 2024, 5:00 IST
ಅನ್ವಿತ್‌ಕುಮಾರ್
ಅನ್ವಿತ್‌ಕುಮಾರ್   

ಮಡಿಕೇರಿ: ಕಳೆದ ಶುಕ್ರವಾರ ಇಲ್ಲಿನ ರೆಡ್‌ ‌ಬ್ರಿಕ್ಸ್‌ ಇನ್‌ ಹೋಟೆಲ್‌ನ ಸತ್ಕಾರ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆದಿತ್ತು. ಮುಖ್ಯ ಅತಿಥಿಗಳ ಭಾಷಣವೆಲ್ಲವೂ ಮುಗಿದ ಬಳಿಕ ಬಹುತೇಕ ಮಂದಿ ಮೆಟ್ಟಿಲುಗಳನ್ನು ಇಳಿಯುತ್ತ ಮನೆಯ ಕಡೆಗೆ ಹೊರಟಿದ್ದರು. ಆಗ ಕೇಳಿ ಬಂದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...’ ಎಂಬ ಹಾಡನ್ನು ಕೇಳಿದ ಜನರು ಮತ್ತೆ ಮೆಟ್ಟಿಲು ಹತ್ತುತ್ತಾ ಸಭಾಂಗಣದತ್ತ ಹೊರಟರು.

ಗಜಾನನ ಶರ್ಮಾ ಅವರ ಈ ಹಾಡು ಎಂಥವರನ್ನಾದರೂ ಸೆಳೆಯದೇ ಇರದು. ಆದರೆ, ಯೂಟ್ಯೂಬ್‌ ಸೇರಿದಂತೆ ಈಗಾಗಲೇ ಸಾಕಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಾಡು ಲಭ್ಯವಿದ್ದರೂ ಜನರು ಮತ್ತೆ ಬಂದುದಕ್ಕೆ ಅದು ಈ ಹಾಡನ್ನು ಹಾಡುತ್ತಿದ್ದ ಯುವಪ್ರತಿಭೆ ಸಿ.ವಿ.ಅನ್ವಿತ್‌ಕುಮಾರ್ ಅವರ ಕಂಠಸಿರಿಯೂ ಕಾರಣವಾಗಿತ್ತು. ಇವರ ಹಾಡನ್ನು ಕೇಳಿದ ಬಹಳಷ್ಟು ಮಂದಿ ಇವರ ಗಾಯನಕ್ಕೆ ತಲೆದೂಗಿದರು.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಗ್ರಾಮದ ಅನ್ವಿತ್‌ಕುಮಾರ್ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದಲ್ಲಿ ಇನ್ನೂ ಕಲಿಯುತ್ತಿದ್ದರೂ ಕರ್ನಾಟಕ ಸಂಗೀತದ ಸೀನಿಯರ್ ವಿಭಾಗದಲ್ಲಿ ಇವರು ಈಗಾಗಲೇ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ. ಮಾತ್ರವಲ್ಲ, ಅಂತರರಾಷ್ಟ್ರೀಯಮಟ್ಟದ 1, ರಾಷ್ಟ್ರಮಟ್ಟದ 1, ರಾಜ್ಯಮಟ್ಟದ 09 ಪ್ರಶಸ್ತಿಗಳು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ 6 ಕಾರ್ಯಕ್ರಮಗಳಲ್ಲಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇವರೇ ಮುಖ್ಯ ಗಾಯಕರಾಗಿ 9ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಗಾಯನ ಪ್ರಸ್ತುತಪಡಿಸಿದ್ದಾರೆ. ರಾಜ್ಯದ 16ಕ್ಕೂ ಹೆಚ್ಚು ಕಡೆ ಇವರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ADVERTISEMENT

ರಾಷ್ಟ್ರಮಟ್ಟದ ‘ನ್ಯಾಷನಲ್ ಲೆವೆಲ್ ಆರ್ಟ್ ಪ್ಲಸ್ ಇಂಡಿಯಾ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗಾನಸಿರಿ ತುಳುನಾಡ ಧ್ವನಿ ಸ್ಪರ್ಧೆಯಲ್ಲಿ ಪ್ರಥಮ, ಮಧುರ ಮಧುರ ವೀ ಕನ್ನಡ ಗಾನ, ಸಂಗೀತ ರಿಯಾಲಿಟಿ ಶೋ ನಲ್ಲಿ ದ್ವಿತೀಯ, ಗುರುಕುಲ ಕಲಾ ಪ್ರತಿಷ್ಠಾನ ದೇಶಭಕ್ತಿ ಗೀತೆಯಲ್ಲಿ ಪ್ರಥಮ, ಅರಮೆರಿ ಕಳಂಕೇರಿ ಮಠದ ವಚನಾಮೃತ ಸ್ಪರ್ಧೆಯಲ್ಲಿ ಪ್ರಥಮ, ಬೆಳಗಾವಿಯ ಅಥಣಿಯ ಕರುನಾಡ ಗಾನಕೋಗಿಲು ಸ್ಪರ್ಧೆಯಲ್ಲಿ ದ್ವಿತೀಯ, ಮೈಸೂರಿನಲ್ಲಿ ಅಂತರ್ ಕಾಲೇಜು ರಾಜ್ಯಮಟ್ಟದ ಕಲಾ ಸಂಭ್ರಮ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಮ್ಮ ಹೆಗ್ಗುರುತನ್ನು ಮೂಡಿಸಿದ್ದಾರೆ.

ಹಳ್ಳಿಗಾಡಿನಲ್ಲಿರುವ ಮಕ್ಕಳಿಗೆ ಸಂಗೀತವನ್ನು ಹೇಳಿಕೊಡುವ ಹಾಗೂ ಅವರಿಗೆ ಉತ್ತಮ ಅವಕಾಶಗಳು ದೊರೆಯುವಂತೆ ಮಾಡಬೇಕು ಎನ್ನುವ ಇಚ್ಛೆ ಇದೆ.
–ಸಿ.ವಿ.ಅನ್ವಿತ್‌ಕುಮಾರ್, ಯುವ ಗಾಯಕ

ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಮತ್ತು ಸೀನಿಯರ್ ವಿಭಾಗವನ್ನು ವತ್ಸಲಾ ನಾರಾಯಣ್ ಅವರ ಬಳಿ ಅಭ್ಯಾಸ ಕೈಗೊಂಡಿದ್ದರು. ಈಗ ವಿದ್ವತ್‌ನ್ನು ಚೆನ್ನೈನ ಬಾಲಸುಬ್ರಹ್ಮಣ್ಯಂ ಅಯ್ಯರ್ ಅವರ ಬಳಿ ಕಲಿಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ದಾಸರಪದಗಳು, ಜನಪ‍ದಗೀತೆ, ಭಾವಗೀತೆ ಹಾಗೂ ಇನ್ನಿತರ ಗೀತೆಗಳನ್ನು ಹಾಡುವ ವಿರಳ ಕಲಾವಿದರಲ್ಲಿ ಇವರೂ ಒಬ್ಬರು ಎಂಬ ಹೆಸರನ್ನೂ ಪಡೆದಿದ್ದಾರೆ.

ಕೇವಲ ಹಾಡುವುದರಲ್ಲಿ ಮಾತ್ರವಲ್ಲ ಪಕ್ಕವಾದ್ಯದಲ್ಲೂ ಇವರು ಸ್ವತಃ ಸ್ವರ ಹಾಕಿ ನುಡಿಸುತ್ತಾರೆ. ಅವುಗಳಲ್ಲಿ ವಯಲಿನ್, ಕೀಬೋರ್ಡ್, ಗಿಟಾರ್ ಮುಖ್ಯವಾದವು.

ಬಾಳೆಲೆಯ ಗಣಪತಿ ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಮತ್ತು ಸಂಗೀತ ಶಿಕ್ಷಕಿ ಚಂದ್ರಕಲಾಮೂರ್ತಿ ಅವರ ಪುತ್ರ ಇವರಾಗಿದ್ದು, ತಾಯಿಯಂತೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ‘ಅಂಜನ್’ ಸಿನಿಮಾದ ಎರಡು ಹಾಡಿಗೆ ಇವರು ಧ್ವನಿ ನೀಡುವ ಮೂಲಕ ಚಲನಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.

ಸಂಗೀತ ಹಾಡುವುದರಲ್ಲಿ ಮಾತ್ರವಲ್ಲ ಅದನ್ನು ಎಡಿಟಿಂಗ್ ಮಾಡುವುದು ಸೇರಿದಂತೆ ಮೊದಲಾದ ತಾಂತ್ರಿಕ ಕೆಲಸಗಳನ್ನೂ ಇವರು ನಿರ್ವಹಿಸುತ್ತಾರೆ. ಜೊತೆಗೆ, ಹಾಡುಗಳಿಗೆ ಸ್ವತಃ ರಾಗಸಂಯೋಜನೆಯನ್ನೂ ಇವರು ಮಾಡುತ್ತಾರೆ.

ಇವರ ಸಂಪರ್ಕ ಸಂಖ್ಯೆ: 8861132332 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.