ADVERTISEMENT

ಅರೆಭಾಷೆಯ ಮೂವರು ಸಾಧಕರಿಗೆ ಪ್ರಶಸ್ತಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:52 IST
Last Updated 13 ನವೆಂಬರ್ 2025, 2:52 IST

ಮಡಿಕೇರಿ: ‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಕೊಡ ಮಾಡುವ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತಿ ಕೆ.ಆರ್.ಗಂಗಾಧರ, ಪತ್ರಿಕೋದ್ಯಮಿ ಯು.ಪಿ.ಶಿವಾನಂದ ಹಾಗೂ ಅರೆಭಾಷಿಕರ ಸಂಘಟಕ ದಂಬೆಕೋಡಿ ಆನಂದ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು, ನ.30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಐನ್ ಮನೆ ಕುರಿತ ಅರೆಭಾಷೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಅರೆಭಾಷೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ಅಕಾಡೆಮಿ ಪ್ರಾಯೋಜಿತ ಅರೆಭಾಷೆ ನಾಟಕ ‘ಅಪ್ಪ’ ಪ್ರದರ್ಶನಗೊಳ್ಳಲಿದೆ.

ಪ್ರಶಸ್ತಿ ವಿಜೇತರ ಪೈಕಿ ಕೆ.ಆರ್. ಗಂಗಾಧರ ಅವರು ಅರೆಭಾಷೆ ಸಾಹಿತಿ ಹಾಗೂ ಪೋಷಕರು. ಸುಳ್ಯ ತಾಲ್ಲೂಕು ಅರಂತೋಡು ಗ್ರಾಮದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು. ಇವರೊಬ್ಬ ಮಾದರಿ ಶಿಕ್ಷಕರಾಗಿದ್ದು, ಇವರು ಅರೆಭಾಷಿಕ ಸಮುದಾಯದ ಏಕೈಕ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾಗಿದ್ದಾರೆ.

ADVERTISEMENT

ಸುಮಾರು 3 ಸಾವಿರ ಶಬ್ದಗಳನ್ನೊಳಗೊಂಡ ಅರೆಭಾಷೆ– ಕನ್ನಡ –ಇಂಗ್ಲೀಷ್ ಶಬ್ದಕೋಶ, ಅರೆಭಾಷೆ ಗಾದೆಗಳು ಮತ್ತು ನುಡಿಗಟ್ಟುಗಳು ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಇದು ಅರೆಭಾಷೆಗೆ ಲಭ್ಯವಿರುವ ಮೊದಲ ನಿಘಂಟು. ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕೆಲಸಮಾಡಿದ್ದಾರೆ. 2019ರಲ್ಲಿ ಜರುಗಿದ ಮೊತ್ತಮೊದಲ ಅರೆಭಾಷೆ ಸಾಹಿತ್ಯ ಸಮ್ಮೇಳನ ಹಾಗೂ 2022ರಲ್ಲಿ ನಡೆದ ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಅರೆಭಾಷಿಕರ ಸಂಘಟಕರಾಗಿರುವ ದಂಬೆಕೋಡಿ ಸುಬ್ರಾಯ ಆನಂದ ಅವರು ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ (ಕೆ.ಎಸ್.ಎಫ್.ಸಿ) 30 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದವರು. ತಮ್ಮ ಉದ್ಯೋಗದ ನಿಮಿತ್ತ ತಾವು ವಾಸ್ತವ್ಯವಿದ್ದ ಊರುಗಳಲ್ಲೆಲ್ಲಾ ಅರೆಭಾಷಿಕ ಸಮುದಾಯದ ಸಂಘಟನೆಗಳಲ್ಲಿ ತೊಡಗಿದ್ದರು. ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಕೆ.ಎಸ್.ಎಫ್.ಸಿಯಲ್ಲಿ ವಲಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರು ಅರೆಭಾಷೆ ಸಮುದಾಯ ಸಂಘಟನೆಗೆ ಅಪಾರ ಕೊಡುಗೆ ನೀಡಿದ್ದಾರೆ.

ಡಾ.ಯು.ಪಿ.ಶಿವಾನಂದ ಅವರು ವೈದ್ಯಕೀಯ ಪದವೀಧರರಾಗಿದ್ದರೂ ಯಶಸ್ವಿ ಪತ್ರಿಕೋದ್ಯಮಿಯಾಗಿದ್ದಾರೆ. ಬಳಕೆದಾರರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದು ಸುಳ್ಯದಲ್ಲಿ ಬಳಕೆದಾರರ ವೇದಿಕೆ ಸ್ಥಾಪಿಸಿ, ಅದರ ಸಂಚಾಲಕರಾಗಿ ಜನಜಾಗೃತಿ ಮೂಡಿಸಿದ್ದಾರೆ. 

ಬಳಕೆದಾರರ ವೇದಿಕೆ ಎಂಬ ಪತ್ರಿಕೆಯನ್ನು ಪ್ರಕಟಿಸಿ ಉಚಿತವಾಗಿ ಹಂಚಿಕೆ ಮಾಡಿದ್ದಾರೆ. ಅಹಮದಾಬಾದಿನಲ್ಲಿ ನಡೆದ ಬಳಕೆದಾರ ಸಂಘಗಳ ಒಂದು ತಿಂಗಳ ಕಾರ್ಯಾಗಾರದಲ್ಲಿ ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಇದಲ್ಲದೆ ಬೆಂಗಳೂರು, ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಬಳಕೆದಾರರ ಸಮಾವೇಶಗಳಲ್ಲಿ ಪ್ರಬಂಧ ಮಂಡನೆ ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ. ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಬಗ್ಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಬಂಧ ಮಂಡನೆ, ವಿಡಿಯೊ ಪ್ರದರ್ಶನ ನಡೆಸಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.