ADVERTISEMENT

ಮುಪ್ಪುರಿಗೊಂಡವು ಕಲೆ, ಸಾಹಿತ್ಯ, ವಿಚಾರಗೋಷ್ಠಿ

ಪೆರಾಜೆಯಲ್ಲಿ ನಡೆಯಿತು ‘ಅರೆಭಾಷೆ ಕೂಡ್‌ಕಟ್ಟ್’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:37 IST
Last Updated 26 ಡಿಸೆಂಬರ್ 2025, 6:37 IST
ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಅರೆಭಾಷೆ ಕೂಡ್‌ಕಟ್ಟ್ ಕಾರ್ಯಕ್ರಮವನ್ನು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಉದ್ಘಾಟಿಸಿದರು
ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಅರೆಭಾಷೆ ಕೂಡ್‌ಕಟ್ಟ್ ಕಾರ್ಯಕ್ರಮವನ್ನು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಉದ್ಘಾಟಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯ ಗಡಿ ಭಾಗ ಪೆರಾಜೆ ಗ್ರಾಮದಲ್ಲಿ ಬುಧವಾರ ಸಾಹಿತ್ಯ, ಕಲೆ, ವಿಚಾರಗಳು ಮುಪ್ಪುರಿಗೊಂಡಿದ್ದವು.

‌ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ, ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪೆರಾಜೆ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಗೌಡ ಸಮಿತಿ ಸಹಯೋಗದಲ್ಲಿ ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ‘ಅರೆಭಾಷೆ ಕೂಡ್‌ಕಟ್ಟ್’ ಕಾರ್ಯಕ್ರಮದಲ್ಲಿ ಹಲವು ವೈವಿಧ್ಯಮಯವಾದ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಇಡೀ ದಿನ ನಡೆದಿದ್ದು ವಿಶೇಷ ಎನಿಸಿತ್ತು.

ಸೋಬಾನೆ, ಜೋಗುಳ ಪದ, ಅಜ್ಜಿಕತೆ, ಅರೆಭಾಷೆ ಕವನ ರಚನೆ ಕುರಿತ ಸ್ಫರ್ಧೆಗಳು ಗಮನ ಸೆಳೆದವು. ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಲೋಕೇಶ್ ಕುಂಚಡ್ಕ ಇವರು ‘ಅರೆಭಾಷೆ ಇಂದು ಮತ್ತು ನಾಳೆ’ ಎಂಬ ವಿಷಯದ ಬಗ್ಗೆ ಹಾಗೂ ಸಂಜೀವ ಕುದ್ಪಾಜೆ ಅವರು ‘ಅರೆಭಾಷೆಯಲ್ಲಿ ಬದಲಾದ ಮದುವೆ ಕ್ರಮಗಳು’ ಕುರಿತು ಮಾತನಾಡಿದರು. ನಂತರದಲ್ಲಿ ಸಭಿಕರೊಂದಿಗೆ ಸಂವಾದ ನಡೆಯಿತು. 

ADVERTISEMENT

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ‘ಭಾಷೆ ಅವನತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರದ್ದಾಗಿದೆ’ ಎಂದರು.

‘ಆ ದಿಸೆಯಲ್ಲಿ ಸ್ಪಷ್ಟವಾದ ಗುರಿ ಮತ್ತು ದೃಷ್ಟಿ ಇದ್ದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ಪೆರಾಜೆ ಗ್ರಾಮದಿಂದ ಹಲವರು ಅರೆಭಾಷೆಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

‘ಅರೆಭಾಷೆಯ ಆದಿಕವಿ’ ಎಂದೇ ಹೆಸರಾದ ಭವಾನಿಶಂಕರ ಹೊದ್ದೆಟ್ಟಿ ಅವರು ಅರೆಭಾಷೆ ಸಾಹಿತ್ಯ ನಡೆದು ಬಂದ ದಾರಿ ವಿವರಿಸಿದರು.

‘ಅರೆಭಾಷೆಯಲ್ಲಿ ಬರೆಯುವ ಅಭ್ಯಾಸವನ್ನೂ ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರ ಮೇಲಿದೆ’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯ ಸಂಚಾಲಕರಾದ ಗೋಪಾಲ ಪೆರಾಜೆ ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿ‌ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲೋಕೇಶ್ ಊರುಬೈಲು, ಡಾ. ಜ್ಞಾನೇಶ್ ಎನ್.ಎ, ಸಂಜೀವಿನಿ ಒಕ್ಕೂಟದ ಶಿಲಾ ಚಿದಾನಂದ ನಿಡ್ಯಮಲೆ, ಸದಸ್ಯೆ ಕನಕಾಂಬಿಕ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಪೆರಾಜೆ ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭವಾನಿ ಕೊಳಂಗಾಯ, ಪೆರಾಜೆ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಕೆ.ಕೆ.ಪದ್ಮಯ್ಯ ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮನು ಪೆರುಮುಂಡ ಉಪಸ್ಥಿತರಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಶ್ರೀಶಾಸ್ತಾವು ದೇವಸ್ಥಾನ ಪೆರಾಜೆಯ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಸಂಪಾಜೆ ಹೋಬಳಿಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಚಿದಾನಂದ ಪೀಚೆಮನೆ, ಅಕಾಡೆಮಿ ಮಾಜಿ ಸದಸ್ಯ ಸಂಗೀತಾ ರವಿರಾಜ್, ಪೆರಾಜೆಯ ಚಿಗುರು ಯುವಕ ಮಂಡಲದ ಅಧ್ಯಕ್ಷ ರಮೇಶ್ ಮಜಿಕೋಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.