ADVERTISEMENT

ಕಲೆಗಳು ನಾಡಿನ ಅಸ್ಮಿತೆಯ ಪ್ರತಿಬಿಂಬ

ಸಂಪಾಜೆಯಲ್ಲಿ ಸಾಂಸ್ಕೃತಿಕ ಸೌರಭ : ಸೂಜಿಗಲ್ಲಿನಂತೆ ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:00 IST
Last Updated 18 ಜನವರಿ 2026, 6:00 IST
ಸ
   

ಮಡಿಕೇರಿ: ಯಕ್ಷಗಾನ, ಡೊಳ್ಳುಕುಣಿತ, ಪೂಜಾಕುಣಿತ, ಜನಪದ ಗೀತೆ ಗಾಯನ, ಭರತನಾಟ್ಯ, ಸುಗಮ ಸಂಗೀತ ಕಲೆಗಳು ನಾಡಿನ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಕಳಗಿ  ತಿಳಿಸಿದರು. 

ತಾಲ್ಲೂಕಿನ ಸಂಪಾಜೆ ಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ‘ಸಾಂಸ್ಕೃತಿಕ ಸೌರಭ’ದಲ್ಲಿ ಅವರು ಮಾತನಾಡಿದರು.  ಇಂಥ ಕಲಾ ಪ್ರಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಅವರು ಹೇಳಿದರು.

ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಕೊಡಗು ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದೆ ಎಂದು ಹೇಳಿದರು. ಗಮಕ ಕಲಾವಿದ ಗಣೇಶ್ ಉಡುಪ ಅವರು ಮಾತನಾಡಿ ಗಮಕದಂಥ ಜಾನಪದ ಕಲೆ ಅಪರೂಪವಾಗಿದ್ದು, ಸಂಗೀತ ಮತ್ತು ವ್ಯಾಖ್ಯಾನದ  ಅದ್ಭುತ ಎಂದು ವಿವರಿಸಿದರು.

ಸಂಪಾಜೆ  ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಪಾಜೆ ಗ್ರಾಮ ಪಂಚಾಯಿತಿ ಹಾಗೂ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆದ ‘ಸಾಂಸ್ಕೃತಿಕ ಸೌರಭ’ ಆಯೋಜಿಸಲಾಗಿತ್ತು. ಬಿ.ಎಸ್.ಲೋಕೇಶ್ ಸಾಗರ್ ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಎಚ್.ಜಿ.ಕುಮಾರ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.  

ADVERTISEMENT

ಜನಮನ ಸೆಳೆದ ಕಲಾ ಪ್ರದರ್ಶನ

ಸಾಂಸ್ಕೃತಿಕ ಸೌರಭದಲ್ಲಿ ಕೊಡಗಿನಲ್ಲಿ ಅಪರೂಪ ಎನಿಸಿದ ಗಮಕ ಸೇರಿದಂತೆ ಹಲವುಕಲಾ ಪ್ರಕಾರಗಳನ್ನು ಸವಿಯುವ ಅವಕಾಶ ಲಭಿಸಿತು. ವಿರಾಜಪೇಟೆಯ ಸ್ವರ್ಣ ಸಂಗೀತ ಶಾಲೆಯ ದಿಲೀಪ್ ಕುಮಾರ್ ತಂಡದವರು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡಿದರು. ಕುಶಾಲನಗರದ ಕನ್ನಡ ಸಿರಿ ಕಲಾ ವೃಂದದ ಬಿ.ಎಸ್.ಲೋಕೇಶ್ ಸಾಗರ್ ಸುಗಮ ಸಂಗೀತ ಹಾಡಿದರು. ಸೋಮವಾರಪೇಟೆಯ  ಆಕಾಶವಾಣಿ ಕಲಾವಿದ ಬಿ.ಎ.ಗಣೇಶ್ ಶಾಂತಳ್ಳಿ ಮತ್ತು ತಂಡದವರು ಜನಪದ ಗೀತೆ ಹಾಡಿದರು. ಸುಂಟಿಕೊಪ್ಪದ  ವಿದುಷಿ ಸ್ನೇಹಾ ಮತ್ತು ತಂಡದವರು ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ಮಂಡ್ಯ ಜಿಲ್ಲೆಯ ವೀರಗಾಸೆ ಕುಣಿತದ ಪ್ರದೀಪ್ ಮತ್ತು ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು. ಮಂಡ್ಯ ಜಿಲ್ಲೆಯ ಸಂತೋಷ್ ಕೆ.ಪಿ. ಮತ್ತು ತಂಡದವರು ವೀರಗಾಸೆ ಕುಣಿತ ಪ್ರದರ್ಶಿಸಿದರು. ಸುಳ್ಯ ತಾಲ್ಲೂಕಿನ ಯುವಕ ಯಕ್ಷಗಾನ ಕಲಾತಂಡದ ಶೇಖರ್ ಮಣಿಯಾನಿ ಅವರು ಯಕ್ಷಗಾನ ನಾಟ್ಯ ಪ್ರದರ್ಶಿಸಿದರು. ಗಣೇಶ್ ಉಡುಪ ಮತ್ತು ಪ್ರೊ.ಜಿ.ಎನ್.ಅನಸೂಯ ಅವರು ಗಮಕ ಕಾವ್ಯ ಭಾಗ ಕುಮಾರ ವ್ಯಾಸ ಭಾರತ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.