ನಾಪೋಕ್ಲು: ಇಲ್ಲಿನ ಶ್ರೀರಾಮ ಟ್ರಸ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ವತಿಯಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿ. ಮೇಕೆರಿರ ಕಾರ್ಯಪ್ಪ ಸ್ಮರಣಾರ್ಥ ಆಯೋಜಿಸಿದ್ದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಶ್ರೀರಾಮ ಟ್ರಸ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ತಂಡ ತನ್ನದಾಗಿಸಿಕೊಂಡಿತು. ಮೂರ್ನಾಡು ಕೋಡಂಬೂರಿನ ಜ್ಞಾನಜ್ಯೋತಿ ಎಜುಕೇಶನ್ ಸೊಸೈಟಿ ಹಾಗೂ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ಶಾಲಾ ತಂಡಗಳು ಸಮಾಧಾನಕರ ಬಹುಮಾನ ಪಡೆದುಕೊಂಡವು.
ಶುಕ್ರವಾರ ಶಾಲಾ ಸಭಾಂಗಣದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕೂಡಿಗೆಯ ಸೈನಿಕ್ ಶಾಲೆಯ ವಿದ್ಯಾರ್ಥಿಗಳಾದ ಶಿವಕಾಂತ್ ಯಾದವ್, ಓಂಕಾರ್ ಎಸ್. ಪಮ್ಮರ್, ಅತುಲ್ ಕುಮಾರ್ ಹಾಗೂ ಋಷಿಕೇಶ್ ರೂಗಿ ವಿದ್ಯಾರ್ಥಿಗಳ ತಂಡ 142 ಅಂಕಗಳಿಸಿತು.ವಿಜೇತ ತಂಡಕ್ಕೆ ₹5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶ್ರೀ ರಾಮ ಟ್ರಸ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಹರ್ಷ್ ಕಾರಿಯಪ್ಪ, ಸಹನ ಪಿ.ಎಸ್., ಮಿಶ್ಬ ವಿ.ಯು ಹಾಗೂ ಹ್ನ /////ಪಿ.ವೈ. ವಿದ್ಯಾರ್ಥಿಗಳ ತಂಡ 81 ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಈ ತಂಡಕ್ಕೆ ₹4 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಧೃತಿ ಎಸ್, ದೃತಿ ಕೆ.ಎ, ರಸ್ತಜ್ಞ ಮಾದಪ್ಪ ಹಾಗೂ ಮಹಮ್ಮದ್ ಶಾದಿನ್ ವಿದ್ಯಾರ್ಥಿಗಳ ತಂಡ 67 ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ ₹2 ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಭಾಗಮಂಡಲದ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ರಸಪ್ರಶ್ನೆ ಸ್ಪರ್ಧೆಗಳು ಸಹಕಾರಿ. ಜ್ಞಾನ ವೃದ್ಧಿಸಿಕೊಂಡು ಉತ್ತಮ ಸಮಾಜವನ್ನು ವಿದ್ಯಾರ್ಥಿಗಳು ನಿರ್ಮಾಣ ಮಾಡಬೇಕು. ಇಂಗ್ಲಿಷ್ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ರೇಡಿಯೋದಲ್ಲಿ ಸುದ್ದಿಗಳನ್ನು ಕೇಳುವುದು, ಪತ್ರಿಕೆಗಳನ್ನು ಓದುವುದು, ಉತ್ತಮ ಪುಸ್ತಕಗಳ ಅಧ್ಯಯನ ಮಾಡಿ ಎಂದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನೆರವಂಡ ಬೋಪಯ್ಯ, ನಿರ್ದೇಶಕರಾದ ಚೌರಿರ ಮಂದಣ್ಣ, ನಾಯಕಂಡ ದೀಪಕ್ ಚಂಗಪ್ಪ, ಬೊಲ್ಳಚೆಟ್ಟಿರ ಸುರೇಶ್, ಕಲ್ಯಾಟಂಡ ಪೂಣಚ್ಚ ಪಾಲ್ಗೊಂಡಿದ್ದರು. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ 16 ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಸುತ್ತಿಗೆ ಐದು ತಂಡಗಳನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.