ADVERTISEMENT

ಯುವಜನತೆಯಲ್ಲಿ ರಕ್ತದಾನದ ಅರಿವು ಮೂಡಲಿ: ವಿಜಯಕುಮಾರ್

ಕ್ರೀಡಾಕೂಟದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:36 IST
Last Updated 14 ಮೇ 2025, 14:36 IST
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಸಂತ ಅಂತೋಣಿ ದೇವಾಲಯದ ಸಹಭಾಗಿತ್ವದಲ್ಲಿ 14ನೇ ವರ್ಷದ ಕ್ರೀಡಾಕೂಟದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಸಂತ ಅಂತೋಣಿ ದೇವಾಲಯದ ಸಹಭಾಗಿತ್ವದಲ್ಲಿ 14ನೇ ವರ್ಷದ ಕ್ರೀಡಾಕೂಟದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು   

ಸುಂಟಿಕೊಪ್ಪ: ರಕ್ತದಾನವು ಜಾತಿ, ಮತ, ಪಂಥ ಭೇದವಿಲ್ಲದೆ ಮನುಷ್ಯರ ಜೀವ ಉಳಿಸುವ ಕಾರ್ಯವಾಗಿದ್ದು, ರಕ್ತದಾನ ಮಹತ್ವ ಕುರಿತು ಯುವಜನತೆಯಲ್ಲಿ ಆರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೆ.ಫಾ.ವಿಜಯಕುಮಾರ್ ಹೇಳಿದರು.

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಸಂತ ಅಂತೋಣಿಯವರ ದೇವಾಲಯ ಸಹಭಾಗಿತ್ವದಲ್ಲಿ 14ನೇ ವರ್ಷದ ಕ್ರೀಡಾಕೂಟದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.

ಎಲ್ಲರ ರಕ್ತದ ಬಣ್ಣವೂ ಕೆಂಪು, ಈ ಸರಳ ಸತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ, ವಿವಿಧತೆಯಲ್ಲಿ ಏಕತೆಯನ್ನು ಪಾಲಿಸಿಕೊಂಡು ಪರಸ್ಪರ ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಬಾಳಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಸಮಾಜ ಸಾಗುತ್ತಿರುವ ದಾರಿಯನ್ನು ನೋಡಿದಾಗ ರಕ್ತದಾನ ಶಿಬಿರದ ಮೂಲಕ ನಾವೆಲ್ಲಾರೂ ಒಂದೇ ಎಂಬ ಪರಮಸತ್ಯವನ್ನು ಸಾರಿ ಒಗ್ಗಟ್ಟಿನಿಂದ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಮತ್ತು ಎಲ್ಲಾ ಜಾತಿ ಜನಾಂಗ ಪ್ರಮುಖರು ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚಾಗಿ ಸಂಘಟಿಸುವಂತೆ ಅವರು ಕರೆ ನೀಡಿದರು.

ADVERTISEMENT

ಕೊಡಗು ವೈದ್ಯಕೀಯ ಸಂಸ್ಥೆಗಳ ಆಧೀನದಲ್ಲಿರುವ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದಾನದ ಮಹತ್ವ ಹೆಚ್ಚಾಗಿ ಪ್ರಚಾರಗೊಳ್ಳುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಸಾಮೂಹಿಕ ರಕ್ತದಾನ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ. ಹಾಗೆಯೇ ವೈಯಕ್ತಿಕ ನೆಲೆಗಟ್ಟಿನಲ್ಲಿ ಕೂಡ ನಿಯಮಿತವಾಗಿ ರಕ್ತದಾನ ಮಾಡುವುದು ಹವ್ಯಾಸವಾಗಬೇಕು. ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತ ಸಂಗ್ರಹ ಕಡಿಮೆಯಿದ್ದು ರಕ್ತದಾನಿಗಳು ಸಹಕರಿಸುವಂತೆ ಮನವಿ ಮಾಡಿದರು.

ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು. ಈ ಶಿಬಿರದಲ್ಲಿ 25ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ಆಮ್ಮತ್ತಿ ದೇವಾಲಯದ ಧರ್ಮಗುರುಗಳಾದ ಮದಲೈಮುತ್ತು, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಝ್, ಸಂತ ಅಂತೋಣಿ ದೇವಾಲಯದ ಕ್ರೀಡಾ ಆರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ.ಬಿಜು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕಾರ್ಯದರ್ಶಿ ಜೂಡಿವಾಝ್, ಖಜಾಂಚಿ ಜೇಮ್ಸ್ ಡಿಸೋಜ, ಮಹಿಳಾ ಘಟಕದ ಅಧ್ಯಕ್ಷ ಫಿಲೋಮಿನಾ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಹಿಳಾ ಘಟಕಗಳ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ಗ್ರೇಸಿ ಡೇವಿಡ್, ಗೌರವ ಸಲಹೆಗಾರರಾದ  ಎಸ್.ಎಂ.ಡಿಸಿಲ್ವಾ, ಪಿ.ಎಫ್‌.ಸಭಾಸ್ಟೀನ್, ವಿನ್ಸೆಂಟ್, ಪಿಲಿಫ್ ವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.